

ಪಿರಿಯಾಪಟ್ಟಣ: ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲು ಪಾಲಕರು ಸಹಕರಿಸಬೇಕು ಎಂದು ಶ್ರೀ ಸೋಮೇಶ್ವರ ಕ್ರೀಡಾ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಶರತ್ ಕುಮಾರ್ ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶ್ರೀ ಸೋಮೇಶ್ವರ ಕ್ರೀಡಾ ಸಂಸ್ಥೆಯ ಆಶ್ರಯದಲ್ಲಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವ ಆಸಕ್ತಿ ಮಕ್ಕಳಲ್ಲಿ ಕುಂದುತ್ತಿದ್ದು, ಬಹುತೇಕ ಮಕ್ಕಳು ಮೊಬೈಲ್ ನೋಡುವುದರಲ್ಲಿ ಸಮಯ ಕಳೆಯುತ್ತಿದ್ದಾರೆ. ಇದರಿಂದಾಗಿ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಎಲ್ಲರಿಗೂ ಬಹುಮಾನಗಳು ಸಿಗದೆ ಇರಬಹುದು. ಆದರೆ, ಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸಿದ ಸಂತೃಪ್ತಿ ಇರುತ್ತದೆ ಎಂದರು.
ಶಿವು ಸೇನೆ ಅಕಾಡೆಮಿ ಸಂಸ್ಥಾಪಕ ಮಾಜಿ ಸೈನಿಕ ಶಿವು ಮಾತನಾಡಿ, ಯುವ ಸಮುದಾಯಕ್ಕೆ ತನ್ನ ಸಾಮರ್ಥ್ಯ ಸಾಬೀತು ಪಡಿಸಲು ದಸರಾ ಕ್ರೀಡಾಕೂಟ ಒಂದು ಉತ್ತಮ ವೇದಿಕೆ ಎಂದರು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾಕಿ ತರಬೇತುದಾರ ಆರ್.ಸುಂದರೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ್, ಮಾಜಿ ಸೈನಿಕ ಸ್ವಾಮಿ, ಭಾರತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗಣೇಶ್, ಹೇಮಂತ್, ರವಿ ಕಿಶೋರ್, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಕ್ರೀಡಾಪಟುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.