

ಸರಗೂರು: ತಾಲೂಕು ಮಟ್ಟದಲ್ಲಿ ಸಂಘಟನೆ ಬಲವರ್ಧನೆ ಮಾಡುವ ಮೂಲಕ ಮುಂದಿನ ಹೋರಾಟಕ್ಕೆ ಸಜ್ಜಾಗಬೇಕು ಎಂದು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆಯಲಾಗಿದ್ದ ದಸಂಸ ಅಂಬೇಡ್ಕರ್‌ವಾದ ಸಂಘಟನೆಯ ಜಿಲ್ಲಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಎಚ್.ಡಿ.ಕೋಟೆ, ಸರಗೂರು, ನಂಜನಗೂಡು, ಸಾಲಿಗ್ರಾಮ ಹೊರತು ಪಡಿಸಿ ಉಳಿದ ತಾಲೂಕಿನಲ್ಲಿ ಪದಾಧಿಕಾರಿಗಳು ಪೂರ್ಣ ಆಗದೆ ಇರುವುದರಿಂದ ಸಂಘಟನೆಯ ಬಲವರ್ಧನೆ ಸಾಧ್ಯ ಆಗುತ್ತಿಲ್ಲ. ಇದರಿಂದ ಹೋರಾಟಗಳಿಗೆ ಹಿನ್ನಡೆ ಆಗಿದೆ ಹಾಗಾಗಿ ಮುಂದಿನ ದಿನಗಳಲ್ಲಿ ಸಮುದಾಯದ ಮೇಲೆ ಹಾಗೂ ಸಂಘಟನೆಯ ಮುಖಂಡರ ಮೇಲೆ ಆಗುತ್ತಿರುವ ಅನ್ಯಾಯ ತಡೆಯಲು ಹೋರಾಟ ಗಟ್ಟಿಗೊಳಿಸಲು ಸಂಘಟನೆಯನ್ನು ಬಲಿಷ್ಠಗೊಳಿಸಬೇಕು ಎಂದರು.
ಮಹಿಳೆಯರನ್ನು ಹೋರಾಟಕ್ಕೆ ಕರೆತರುವ ಕೆಲಸವನ್ನು ಸಂಘಟನೆಗಳು ಮಾಡಬೇಕು. ಅದೇ ರೀತಿ ವಿದ್ಯಾರ್ಥಿಗಳನ್ನು ಹೋರಾಟದ ಕಡೆ ಕರೆತಂದು ಚಳವಳಿ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ಜಿಲ್ಲೆಯ ಕೆಲವು ತಾಲೂಕಿನಲ್ಲಿ ಪೊಲೀಸ್ ಇಲಾಖೆಯಿಂದ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ. ಈ ಬಗ್ಗೆ ಮುಂದಿನ ದಿನ ನಡೆಯುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆಯಲ್ಲಿ ಎಸ್.ಪಿ. ಅವರ ಗಮನಕ್ಕೆ ತರಲು ತೀರ್ಮಾನ ತೆಗೆದುಕೊಳ್ಳಲಾಯಿತು ಎಂದರು.
ಜಿಲ್ಲೆಯಲ್ಲಿ ಬಹುತೇಕ ತಾಲೂಕಿನಲ್ಲಿ ಸಂಘಟನೆಗಳ ಮುಖಂಡರ ಮೇಲೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗುತ್ತಿದ್ದು, ಇದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಇಂತಹ ಘಟನೆಗಳು ನಡೆಯಲು ಸಾಧ್ಯ ಆಗಿದೆ.
ಅನಿವಾರ್ಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದೇವೆ ಹೊರತು, ನಮಗೆ ಅನ್ಯಾಯ ಮಾಡಿದಾಗ ಸುಮ್ಮನೆ ಇರಬೇಕು ಅಂತೇನು ಅಲ್ಲಾ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರು ಕೂಡ ಮತ್ತೆ ಇಂತಹ ಪ್ರಕರಣ ಮರುಕಳಿಸುತ್ತಿದ್ದು, ಹೋರಾಟ ಮಾಡಬೇಕಾದ ಅನಿವಾರ್ಯ ಆಗಿದೆ ಎಂದರು.
ಕೆ.ಆರ್.ನಗರ ಜಿಲ್ಲಾ ಸಂಘಟನಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು ಮಾತನಾಡಿ, ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ದಲಿತ ಸಂಘಟನೆಗಳ ಬೆಂಬಲ ಕೋರಿದ ಹಿನ್ನೆಲೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಸಂಘಟನೆ ಬೆಂಬಲ ನೀಡಲಾಯಿತು. ಆದರೆ ಚುನಾವಣೆಯಲ್ಲಿ ಗೆದ್ದ ನಂತರ ಕಾಂಗ್ರೆಸ್ ಪಕ್ಷದ ಶಾಸಕರು ಸಂಘಟನೆಗಳ ಮುಖಂಡರ ಮೇಲೆ ಹರಿಹಾಯ್ದ ಘಟನೆಗಳು ನಡೆಯುತ್ತಿದ್ದು, ಅವರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಹೋರಾಟ ರೂಪಿಸಬೇಕಿದೆ ಎಂದರು.
ಎಚ್.ಡಿ.ಕೋಟೆ ತಾಲೂಕಿನ ನಂಜನಾಯಕನಹಳ್ಳಿ ವಡ್ಡರ ಪಾಳ್ಯದ ಅಂಬೇಡ್ಕರ್ ಭವನವನ್ನು ದೇವಸ್ಥಾನ ಪರಿವರ್ತನೆ ಆಗುತ್ತಿರುವ ವಿಚಾರದಲ್ಲಿ ಶಾಸಕರು ಮತ್ತು ಸಂಘಟನೆಯ ಮುಖಂಡರ ನಡುವೆ ನಡೆದ ಘಟನೆ ಬಗ್ಗೆ ರಾಜ್ಯ ಸಮಿತಿ ಗಮನಕ್ಕೆ ತಂದು ಮುಖ್ಯಮಂತ್ರಿಗಳ ಬಳಿ ಆಯೋಗ ತೆರಳಿ ಚರ್ಚೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಬನ್ನಹಳ್ಳಿ ಸೋಮಣ್ಣ, ಜಿಲ್ಲಾ ಉಪ ಪ್ರಧಾನ ಸಂಚಾಲಕ ದೊಡ್ಡಸಿದ್ದು, ಹಾದನೂರು, ಜಿಲ್ಲಾ ಮಹಿಳಾ ಸಂಚಾಲಕಿ ಕಟ್ಟೆಮಳಲವಾಡಿ ಮಹಾದೇವಮ್ಮ, ವಾಟಾಳ್ ನಾಗರಾಜು, ಕುಮಾರ್, ತಾಲೂಕು ಸಂಚಾಲಕ ಸಣ್ಣಕುಮಾರ್, ಗೋವಿಂದರಾಜು, ಬಲರಾಮ್, ಮಹೇಶ್ ಕಟ್ಟೆಮಳಲವಾಡಿ, ಚಿಕ್ಕಚೆಲುವ, ಕೃಷ್ಣ , ರವಿ ಜಿ.ಜಿ ಕಾಲೋನಿ, ಶಿವಕುಮಾರ್, ವಿಜಯಲಕ್ಷ್ಮೀ, ಉದಯ, ಕೃಷ್ಣ ಮೂರ್ತಿ, ಮಂಜು ಬೆಳ್ತೂರು, ಅನು, ಶಿವಕುಮಾರ್, ಮಹಾದೇವಸ್ವಾಮಿ ಇದ್ದರು.