

ತಿ.ನರಸೀಪುರ : ಬೌದ್ಧ ಧರ್ಮದಲ್ಲಿ ಸಮಾನತೆ ಮತ್ತು ಕರುಣೆ ಪ್ರಮುಖ ಸಿದ್ಧಾಂತವಾಗಿದ್ದು, ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಜನಸಮುದಾಯ ಗೌತಮ ಬುದ್ಧನ ಮಾರ್ಗದಲ್ಲಿ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ಧಾರ್ಥ ಕರೆ ನೀಡಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಧಮ್ಮ ದೀಕ್ಷೋತ್ಸವ ಆಚರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬುದ್ಧನ ಮಾರ್ಗವನ್ನು ಅನುಸರಿಸುವಲ್ಲಿ ಹಾಗೂ ಬೌದ್ಧ ಧರ್ಮ ಆಚರಣೆ ಮಾಡುವಲ್ಲಿ ನಮ್ಮಲ್ಲಿ ವೈರುಧ್ಯವಿದೆ. ಭಾಷಣ ಕೇಳಿ ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿಬಿಡುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಗತ್ತಿನ ಅನೇಕ ಧರ್ಮಗಳನ್ನು ಅಧ್ಯಯನ ಮಾಡಿದ ಅಂಬೇಡ್ಕರ್ ಕೊನೆಗೆ ಬೌದ್ಧ ಧರ್ಮವನ್ನು ನಾಗಪುರದಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಸ್ವೀಕರಿಸಿದರು. ಅಂಬೇಡ್ಕರ್ ಅವರನ್ನು ಗೌರವಿಸುವ ಪ್ರತಿಯೊಬ್ಬರು ಇನ್ನಾದರೂ ಬುದ್ಧನ ಮಾರ್ಗದಲ್ಲಿ ನಡೆಯಬೇಕೆಂದು ಮನವಿ ಮಾಡಿದರು.
ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ ಮಾತನಾಡಿ, ದೇಶದಲ್ಲಿ ಅಂಬೇಡ್ಕರ್ ಅವರು ಧರ್ಮದ ಪುನರುತ್ಥಾನಕ್ಕೆ ಬುನಾದಿ ಹಾಕಿದರು. ನಿಜವಾದ ಅಂಬೇಡ್ಕರ್ ಅನುಯಾಯಿ ಅಥವಾ ವಿಚಾರ ವಾದಿಯಾಗಲು ಮೊದಲು ಮನೆ ಮಂದಿಯನ್ನ, ನಂತರ ಊರಿನವರನ್ನು ಎದುರು ಹಾಕಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಶೋಷಿತರು ಮತ್ತು ಹಿಂದುಳಿದ ವರ್ಗಗಳು ಜಾಗೃತರಾಗಿ ಬುದ್ಧನ ಕಡೆಗೆ ನಡೆಯಲು ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.
ನಳಂದ ಬುದ್ಧ ವಿಹಾರದ ಭಂತೆ ಬೋಧಿರತ್ನ ಅವರು ಆಶೀರ್ವಚನ ನೀಡಿದರು. ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ಎಸ್ಸಿ/ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ಸೋಸಲೆ ಮಹದೇವಸ್ವಾಮಿ, ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಹಾಗೂ ಕೋಮಲಾಕ್ಷಿ ಮಾತನಾಡಿದರು.
ಕಾರ್ಯಕ್ರಮಕ್ಕೂ ಮೊದಲು ತಾಲೂಕು ಕಚೇರಿ ಮುಂಭಾಗವಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ತಾ.ಪಂ. ಮಾಜಿ ಉಪಾಧ್ಯಕ್ಷ ಕುಕ್ಕೂರ ಪ್ರಸನ್ನ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಎನ್.ಲಿಂಗಪ್ಪಾಜಿ, ಜನಜಾಗೃತಿ ವೇದಿಕೆ ಸಂಚಾಲಕ ಕೆ.ಎನ್. ಪ್ರಭುಸ್ವಾಮಿ, ಡಿಜೆಎಸ್ ಜಿಲ್ಲಾಧ್ಯಕ್ಷ ತುಂಬಲ ಮಂಜುನಾಥ್, ಬಾಬೂಜಿ ಜನ ಕಲ್ಯಾಣ ಸಂಘದ ಅಧ್ಯಕ್ಷ ಮಲಿಯೂರು ಡಿ.ಶಂಕರ್, ದಸಂಸ ಜಿಲ್ಲಾ ಸಂಚಾಲಕರಾದ ಸೋಸಲೆ ರಾಜಶೇಖರ್, ಬನ್ನಹಳ್ಳಿ ಸೋಮಣ್ಣ, ಯರಗನಹಳ್ಳಿ ಸುರೇಶ್, ಕುಕ್ಕೂರು ರಾಜು, ಮುಖಂಡರಾದ ಎಸ್.ನಂಜುಂಡಯ್ಯ, ಎ.ಶಿವಕುಮಾರ್(ಬಡ್ಡು), ತಾಯೂರು ಸಾಗರ್, ಮಹದೇವಮ್ಮ ಎಸ್.ಸಿ.ಗಣೇಶಸ್ವಾಮಿ, ಕಲಿಯೂರು ಶಿವಣ್ಣ, ಎಂ.ಎಸ್.ಬಸವರಾಜು, ಕೆಂಚಪ್ಪ, ತೊಟ್ಟವಾಡಿ ಅನಿಲ್ ಕುಮಾರ್, ದೊಡ್ಡಪುರ ಲಕ್ಷ್ಮಣ, ಕಿರಗಸೂರು ಚಂದ್ರಮ್ಮ, ತಿವೇಣಿನಗರ ಮಹೇಶ್, ಕೆಬ್ಬೆಹುಂಡಿ ನಿಂಗರಾಜು, ಬೆನಕನಹಳ್ಳಿ ಗಂಗಾಧರ್, ನಿಲಸೋಗೆ ಬಸವರಾಜು, ರಾಜಮ್ಮ, ಕುಪ್ಯ ಗವಿಸಿದ್ದಯ್ಯ, ಬನ್ನಹಳ್ಳಿ ಪುಟ್ಟಸ್ವಾಮಿ, ಕೆ.ಎಂ.ಶಿವಕುಮಾರ್ ಹಾಗೂ ಇತರರು ಇದ್ದರು.