ಸಮಾಜದಲ್ಲಿ ರಕ್ತದಾನಿಗಳ ಸಂಖ್ಯೆ ಹೆಚ್ಚಾಗಲಿ

blood donor
23 ಬಾರಿ ರಕ್ತದಾನ ಮಾಡಿರುವ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಅಶ್ವಿನಿ ಅವರನ್ನು ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆಯಲ್ಲಿ ಸನ್ಮಾನಿಸಲಾಯಿತು. ಡಾ. ಜಿ.ಸಿ.ದಿನೇಶ್, ಡಾ. ಸೈಯ್ಯದ್ ಸನಾವುಲ್ಲಾ, ಡಾ. ಶುಭಾ ಮರವಂತೆ, ಡಾ. ಕೆ.ಎನ್.ಮಂಜುನಾಥ್, ಡಾ. ಪ್ರಕಾಶ್ ಮರ‌್ಗನಳ್ಳಿ, ಡಾ. ಹಾಲಮ್ಮ ಇದ್ದರು.
Published on

ಶಿವಮೊಗ್ಗ: ರಕ್ತದಾನದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜಾಗೃತಿ ಮೂಡುತ್ತಿರುವುದು ಉತ್ತಮ ಬೆಳವಣಿಗೆ. ಇದು ಇನ್ನಷ್ಟು ಹೆಚ್ಚಬೇಕು. ರಕ್ತದಾನಿಗಳ ಸಂಖ್ಯೆ ಜಾಸ್ತಿಯಾಗಬೇಕು ಎಂದು ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ. ಜಿ.ಸಿ.ದಿನೇಶ್ ಹೇಳಿದರು.

ಜಿಲ್ಲಾಡಳಿತ, ರೆಡ್‌ಕ್ರಾಸ್ ಘಟಕದಿಂದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಎಷ್ಟೋ ಮಂದಿ ತುರ್ತು ಸಂದರ್ಭದಲ್ಲಿ ರಕ್ತ ದೊರೆಯದ ಕಾರಣ ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ. ಆದ್ದರಿಂದ ಆರೋಗ್ಯವಂತರು ರಕ್ತದಾನ ಮಾಡಬೇಕು ಎಂದು ತಿಳಿಸಿದರು.
ಮೆಗ್ಗಾನ್ ಆಸ್ಪತ್ರೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಗೀತಾಲಕ್ಷ್ಮೀ ಮಾತನಾಡಿ, ರಕ್ತದಾನ ಮಹತ್ವವಾದುದು. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಬರುವುದಿಲ್ಲ. ಯುವಕರು ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನದ ಬಗ್ಗೆ ತಪ್ಪು ಗ್ರಹಿಕೆಗಳು ಸಲ್ಲದು ಎಂದರು.
ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್.ಮಂಜುನಾಥ್ ಮಾತನಾಡಿ, ಒಬ್ಬರ ಜೀವ ಉಳಿಸಲು ರಕ್ತದಾನ ಬಹಳ ಪವಿತ್ರವಾದುದು. ಮುಂಬರುವ ದಿನಗಳಲ್ಲಿ ಸಹ್ಯಾದ್ರಿ ಮೂರು ಕಾಲೇಜುಗಳಿಂದ ಎನ್‌ಎಸ್‌ಎಸ್ ಘಟಕ, ರೆಡ್‌ಕ್ರಾಸ್ ನೆರವು ಪಡೆದು ರಕ್ತದಾನ ಶಿಬಿರ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.
23 ಬಾರಿ ರಕ್ತದಾನ ಮಾಡಿರುವ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಅಶ್ವಿನಿ ಸನ್ಮಾನ ಸ್ವೀಕರಿಸಿ ಮಾತನಾಡಿ, ರಕ್ತದಾನ ಮಾಡುವುದರಿಂದ ಆತ್ಮತೃಪ್ತಿ ಸಿಗುತ್ತದೆ. ಹೆಣ್ಣು ಮಕ್ಕಳು ರಕ್ತದಾನ ಮಾಡಲು ಹಿಂದೇಟು ಹಾಕುತ್ತಾರೆ. ಎಲ್ಲ ಆರೋಗ್ಯವಂತ ಹೆಣ್ಣುಮಕ್ಕಳು ಸಹ ರಕ್ತದಾನ ಮಾಡಬಹುದು. ಮಹಿಳಾ ರಕ್ತದಾನಿಗಳ ಸಂಖ್ಯೆ ಹೆಚ್ಚಬೇಕು. ಮುಖ್ಯವಾಗಿ ವಿದ್ಯಾರ್ಥಿನಿಯರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಪ್ರಾಚಾರ್ಯ ಡಾ. ಸೈಯ್ಯದ್ ಸನಾವುಲ್ಲಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಇತ್ತೀಚಿಗೆ ಡ್ರಗ್ಸ್, ಕುಡಿತ ಮುಂತಾದ ದುಶ್ಚಟಗಳು ಹೆಚ್ಚಾಗುತ್ತಿವೆ. ವಿದ್ಯಾರ್ಥಿಗಳು ಇವುಗಳಿಂದ ದೂರವಿದ್ದು ಆರೋಗ್ಯವಂತರಾಗಿರಬೇಕು ಎಂದು ತಿಳಿಸಿದರು.
ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜಕಿ ಡಾ. ಶುಭಾ ಮರವಂತೆ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಪ್ರಕಾಶ್ ಮರ‌್ಗನಳ್ಳಿ, ಡಾ. ಮುದುಕಪ್ಪ, ಡಾ. ಹಾಲಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net