

ಇತ್ತೀಚಿನ ದಿನಗಳಲ್ಲಿ ಕುಟುಂಬದ ಸದಸ್ಯರು ವಯೋವೃದ್ಧರನ್ನು ಹೊರೆ ಎಂಬಂತೆ ಭಾವಿಸುತ್ತಿದ್ದು, ಅವರ ಆರೈಕೆ, ಯೋಗಕ್ಷೇಮದ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದರೆ, ಬೆಳಗಾವಿ ಜಿಲ್ಲಾಸ್ಪತ್ರೆಯ ಪ್ರಕರಣಗಳಂತೂ ಇನ್ನೂ ಚಿಂತಾಜನಕ. ಚಿಕಿತ್ಸೆಗಾಗಿ ಪಾಲಕರನ್ನು ದಾಖಲಿಸಿದ ಮಕ್ಕಳು, ಅವರು ಗುಣಮುಖರಾದರೂ ಮನೆಗೆ ಕರೆದುಕೊಂಡು ಹೋಗಿಲ್ಲ. ಇನ್ನೂ ಕೆಲವರಂತೂ ರೋಗಿಗೆ ಚಿಕಿತ್ಸೆ ನಡೆಯುತ್ತಿರುವಾಗಲೇ ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ಪರಾರಿಯಾಗಿದ್ದಾರೆ. ಪಾಲಕರನ್ನು ಆಸ್ಪತ್ರೆಯಲ್ಲೇ ಬಿಟ್ಟುಹೋದ 152 ಪ್ರಕರಣಗಳು
ಕಳೆದ ಎರಡು ವರ್ಷಗಳಲ್ಲೇ ಸಂಭವಿಸಿವೆ ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬಹುದು. 62 ವೃದ್ಧರನ್ನು ವಿವಿಧ ಆಶ್ರಮಗಳಿಗೆ ಸ್ಥಳಾಂತರಿಸಲಾಗಿದೆ ಎಂಬುದೇನೋ ನಿಜ. ಆದರೆ, ಅಲ್ಲಿ ಅವರು ಜೀವನದ ಸಂಧ್ಯಾಕಾಲದಲ್ಲಿ ನೆಮ್ಮದಿಯ ದಿನಗಳನ್ನು ಕಾಣಲು ಸಾಧ್ಯವೆ? 17 ವೃದ್ಧರನ್ನು ಜಿಲ್ಲಾಸ್ಪತ್ರೆ ಸಿಬ್ಬಂದಿ ಮನೆಗೆ ತಲುಪಿಸಿರುವುದು ಸಮಾಧಾನಕರ.
ಯಾವ ವಯಸ್ಸಿನಲ್ಲಿ ಆರೈಕೆ, ಪ್ರೀತಿಯ ಅವಶ್ಯಕತೆ ಇರುತ್ತದೆಯೋ ಅಂಥ ಹೊತ್ತಲ್ಲಿ ಅವರನ್ನು ತಬ್ಬಲಿಗಳನ್ನಾಗಿ ಮಾಡುವುದು ಯಾವ ನ್ಯಾಯ? ತಂದೆ-ತಾಯಿಯನ್ನು ಬದುಕಿನ ದೊಡ್ಡ ಸಂಪತ್ತು ಎಂದು ಹೇಳಲಾಗುತ್ತದೆ. ಏಕೆಂದರೆ, ಹಣದಿಂದ ಈಗಿನ ದಿನಗಳಲ್ಲಿ ಏನು ಬೇಕಾದರೂ ಖರೀದಿಸಬಹುದು. ಆದರೆ, ಎಷ್ಟೇ ಸಂಪತ್ತಿದ್ದರೂ ತಂದೆ-ತಾಯಿಯನ್ನು ಮರಳಿ ಪಡೆಯಲು ಸಾಧ್ಯವಿಲ್ಲ.
ಈ ವಾಸ್ತವವನ್ನು ಇಂದಿನ ಯುವಪೀಳಿಗೆ ಮರೆಯುತ್ತಿರುವುದು ದುರದೃಷ್ಟಕರ. ಅಷ್ಟಕ್ಕೂ, ಮಾನವೀಯತೆಯನ್ನೇ ಮರೆತರೆ ಬದುಕಿಗೇನು ಅರ್ಥ? ಮಕ್ಕಳಿಗೆ ಶಿಕ್ಷಣ, ಸಂಸ್ಕಾರ, ಬದುಕು ಎಲ್ಲವನ್ನೂ ಒದಗಿಸುವ ಪಾಲಕರನ್ನು ಸರಿಯಾಗಿ ನೋಡಿಕೊಳ್ಳುವುದು ಮಕ್ಕಳ, ಸಂಬಂಧಿಕರ ಕರ್ತವ್ಯ. ಆದರೆ, ವಯಸ್ಸಾಗಿದೆ ಎಂಬ ಕಾರಣಕ್ಕೆ ಅವರನ್ನು ದೂರ ಮಾಡುವುದು ಸರಿಯಲ್ಲ. ಇಂದು ಯೌವನಾವಸ್ಥೆಯಲ್ಲಿ ಇರುವವರು ಮುಂದೊಂದು ದಿನ ವೃದ್ಧಾಪ್ಯದ ಸ್ಥಿತಿಯನ್ನು ತಲುಪಲೇ ಬೇಕು. ಇದು ನಿಸರ್ಗದ ನಿಯಮ. ಹೀಗಿರುವಾಗ, ಹಿರಿಯರನ್ನು ಅಲಕ್ಷಿಸುವುದು ಸಂವೇದನಾಶೂನ್ಯತೆಗೆ ಸಾಕ್ಷಿ.
ಈ ನಿಟ್ಟಿನಲ್ಲಿ ಜನರ ಮನೋಭಾವ ಬದಲಾಗಬೇಕು. ಅದುವೇ ಪರಿಹಾರ. ಈ ವಿಷಯದಲ್ಲಿ ಸರ್ಕಾರದ್ದು ಸೀಮಿತ ಪಾತ್ರ. ಜನರ ಅಂತಃಕರಣ ಜಾಗೃತಗೊಂಡರೆ ಸ್ವಾರ್ಥ ಕಡಿಮೆಯಾಗಿ, ಹೃದಯವೈಶಾಲ್ಯ ಹೆಚ್ಚುತ್ತದೆ. ಮುಖ್ಯವಾಗಿ, ನಮ್ಮ ಕೌಟುಂಬಿಕ ಮೌಲ್ಯಗಳ ಹಿರಿಮೆ-ಗರಿಮೆಯನ್ನು ಅರಿತುಕೊಳ್ಳಬೇಕು. ಹಿರಿಯ ರೊಡನೆ ಬಾಳುವುದರಲ್ಲೇ ನಿಜವಾದ ನೆಮ್ಮದಿ, ಸಾರ್ಥಕತೆ ಅಡಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಹಿರಿಯರ ಆರೈಕೆಯಲ್ಲಿ ಹಿಂದಡಿ ಇಡಕೂಡದು.