ಭೂಕುಸಿತ ನಿಯಂತ್ರಣ ಕ್ರಮವಾಗಲಿ: ಅಧ್ಯಯನ ಸಮಿತಿಯ ಸಲಹೆ ಪರಿಗಣನೆ ಅಗತ್ಯ

dfgdg
Published on

ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿ ಸಾವು-ನೋವು ಕೂಡ ಸಂಭವಿಸಿವೆ, ಕೊಡಗಿನ ಕೊಯನಾಡು- ದೇವರಕೊಲ್ಲಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಅರಕಲಗೂಡಿನ ರಸ್ತೆಯೊಂದು ಕುಸಿದಿದೆ. ಕೆಲ ದಿನಗಳ ಹಿಂದೆ ಕೊಡಗು ಜಿಲ್ಲೆಯ ಮದೆನಾಡು ಕೊಪ್ಪಡ್ಡ ಎಂಬಲ್ಲಿ ಭೂಕುಸಿತ ಉಂಟಾಗಿತ್ತು. 2018ರಲ್ಲಿಯೂ ಇದೇ ಸ್ಥಳದಲ್ಲಿ ಭೂಕುಸಿತವಾಗಿತ್ತು. ಭಾರತೀಯ ಭೂಗರ್ಭಶಾಸ್ತ್ರ ಸರ್ವೆಕ್ಷಣಾ ಸಂಸ್ಥೆ (ಜಿಎಸ್​ಐ) ಪ್ರಕಾರ, ಕಳೆದ 7 ವರ್ಷಗಳಲ್ಲಿ ದೇಶದಲ್ಲಿ 3700ಕ್ಕೂ ಅಧಿಕ ಭೂಕುಸಿತಗಳು ಸಂಭವಿಸಿವೆ.

ಕೇರಳ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಭೂಕುಸಿತ ಪ್ರಕರಣಗಳ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿವೆ. ಹೆಚ್ಚಿನ ಭೂಕುಸಿತಗಳಿಗೆ ಮಳೆಯೇ ಪ್ರಮುಖ ಕಾರಣ ಎಂದು ಅಧ್ಯಯನಗಳು ಸೂಚಿಸುತ್ತವೆ. ರಾಜ್ಯದಲ್ಲಿ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಾದ ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡದ ಕಡಿದಾದ ಗುಡ್ಡ ಪ್ರದೇಶಗಳಲ್ಲಿ ಭೂಕುಸಿತಗಳು ಘಟಿಸುತ್ತಿರುತ್ತವೆ. ಭೂಕುಸಿತ ಸಂಭವನೀಯ ಈ ಪ್ರದೇಶವು ರಾಜ್ಯದ ಒಟ್ಟಾರೆ ಪ್ರದೇಶದ ಶೇ. 13ರಷ್ಟಾಗುತ್ತದೆ. ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಭೂ ಅಧ್ಯಯನ ಸಮಿತಿಯು ಕರ್ನಾಟಕ ಪಶ್ಚಿಮ ಘಟ್ಟ ಮತ್ತು ಕರಾವಳಿಯಲ್ಲಿ ಭೂಕುಸಿತ ತಡೆಗಟ್ಟುವ ಹಾಗೂ ನಿಯಂತ್ರಿಸುವ ಮಾಗೋಪಾಯಗಳ ಕುರಿತು ಅಂತಿಮ ಅಧ್ಯಯನ ವರದಿಯನ್ನು ಕಳೆದ ವರ್ಷವೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

ಕರ್ನಾಟಕ ರಾಜ್ಯ ಅವಘಡ ನಿಯಂತ್ರಣ ಪ್ರಾಧಿಕಾರದ ನೇತೃತ್ವದಲ್ಲಿ ಸೂಕ್ತ ನೀತಿ- ಕಾರ್ಯಕ್ರಮಗಳನ್ನು ರೂಪಿಸಬೇಕು; ಜಿಲ್ಲೆ, ತಾಲೂಕು, ಗ್ರಾಪಂ ಮಟ್ಟದಲ್ಲಿರುವ ವಿಪತ್ತು ನಿರ್ವಹಣಾ ಸಮಿತಿಗಳನ್ನು ಸಶಕ್ತಗೊಳಿಸಬೇಕು; ಭೂಕುಸಿತ ಸಾಧ್ಯತೆ ಇರುವ ಪ್ರದೇಶಗಳ ಗ್ರಾಮ ಮಟ್ಟದ ನಕ್ಷೆ ರೂಪಿಸಬೇಕು; ಭೂಕುಸಿತದ ಮುನ್ಸೂಚನೆ ನೀಡುವ ತಾಂತ್ರಿಕ ವ್ಯವಸ್ಥೆ ರೂಪಿಸಬೇಕು; ಹೂಳು ತುಂಬದಂತೆ, ಅತಿಕ್ರಮಣವಾಗದಂತೆ ಜಲಮಾರ್ಗ ನಿರ್ವಹಿಸಬೇಕು; ಸೂಕ್ತ ಭೂಬಳಕೆ ಯೋಜನಾ ನಕ್ಷೆ, ಅನಧಿಕೃತ ಗಣಿ-ಕ್ವಾರಿಗಳ ನಿಯಂತ್ರಣ, ಕಾಡು ಸೀಳುವ ಯೋಜನೆಗಳ ನಿರ್ವಹಣೆಗೆ ಕ್ರಮ- ಹೀಗೆ ಹಲವಾರು ಮಾಗೋಪಾಯ ಗಳನ್ನು ಸಮಿತಿ ಸೂಚಿಸಿದೆ. ಭೂಕುಸಿತ ಸಾಧ್ಯತೆ ಇರುವ ಪ್ರದೇಶಗಳಲ್ಲಿ ರಾಜ್ಯ ಸರ್ಕಾರವು ಈಗಾಗಲೇ ಒಪ್ಪಿರುವ ‘ಸುಸ್ಥಿರ ಅಭಿವೃದ್ಧಿ ಗುರಿ’ ಸೂತ್ರಗಳ ಅನ್ವಯವೇ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕೆಂಬ ಸಲಹೆ ಇದರಲ್ಲಿ ಬಹುಮುಖ್ಯವಾಗಿದೆ. ಈ ವರದಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಸಲಹೆಗಳನ್ನು ವಾಸ್ತವ ನೆಲೆಗಟ್ಟಿನಲ್ಲಿ ಪರಿಶೀಲಿಸಿ, ಸಾಮಾನ್ಯ ಜನಜೀವನಕ್ಕೆ ಅಡಚಣೆಯಾಗದಂತೆ ಜಾರಿಗೆ ತರಲು ಕ್ರಮ ಕೈಗೊಳ್ಳುವುದು ತುರ್ತು ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net