

ಶಿವಮೊಗ್ಗ : ಆಧುನಿಕತೆಯ ಅಹಂಕಾರಕ್ಕೆ ಸಿಕ್ಕಿಕೊಳ್ಳದೆ, ನಾವು ಕಲಿತ ವಿದ್ಯೆ ಸಮಾಜಮುಖಿ ಕಾರ್ಯಕ್ಕೆ ವಿನಿಯೋಗವಾಗಲಿ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ.ಮೋಹನ್ ಚಂದ್ರಗುತ್ತಿ ಆಶಿಸಿದರು.
ಕುವೆಂಪು ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಸ್ತೂರಬಾ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ನಾವು ಭಗವಂತನನ್ನು ಪ್ರಾರ್ಥಿಸುವಾಗ ಸುಖ ಸಂಪತ್ತುಗಳನ್ನು ಬೇಡುತ್ತೇವೆಯೇ ವಿನಃ, ಒಳ್ಳೆಯ ಮನುಷ್ಯನನ್ನಾಗಿ ಮಾಡು ಎಂದು ಕೇಳುತ್ತಿಲ್ಲ. ಯಾವಾಗ ನಾವು ಕೇಳುವುದಿಲ್ಲ ಆಗ ನಮ್ಮ ತನವನ್ನು ನಾವು ಕಳೆದುಕೊಂಡಿದ್ದೇವೆ ಎಂದರ್ಥ. ತಂದೆ ತಾಯಿಗೆ ಒಳ್ಳೆಯ ಮಕ್ಕಳಾಗಿ. ಎಲ್ಲರೂ ಉನ್ನತ ಅಂಕ ಪಡೆಯಿರಿ ಎನ್ನುವುದಕ್ಕಿಂತ ಜೀವನವನ್ನು ಪ್ರೀತಿಯಿಂದ ಬದುಕುವಂತಾಗಬೇಕು ಎಂದರು.
ಇಂದು ಮೊಬೈಲ್ ಗೀಳಿಗೆ ಬಿದ್ದು ಯುವ ಸಮೂಹ ಮೂಲೆ ಸೇರುತ್ತಿದ್ದಾರೆ. ಆಧುನಿಕ ಸಂದರ್ಭದಲ್ಲಿ ಕುಳಿತಲ್ಲಿಯೆ ಎಲ್ಲವೂ ಸಿಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ನಿಜವಾದ ಬದುಕುವ ಕಲೆ ಕಲಿಯಬೇಕಿದೆ. ಸೂಕ್ಷ್ಮವಾಗಿ ಬದುಕುವ ಕ್ರಮಗಳಿಂದ ಹೊರ ಬನ್ನಿ. ಅಂಧಕಾರ, ವೌಡ್ಯತೆ, ವೈರುದ್ಯಗಳನ್ನು ಹೋಗಲಾಡಿಸಿ ಎಂದು ಕಿವಿಮಾತು ಹೇಳಿದರು.
ಅಧ್ಯಯನ ನಮ್ಮನ್ನು ಪುಣ್ಯವಂತನಾಗಿ ಮಾಡುತ್ತದೆ. ನಮ್ಮಲ್ಲಿ ಒಡಮೂಡುವ ಸಾಮಾಜಿಕ ಜವಾಬ್ದಾರಿಗಳು ನಮ್ಮನ್ನು ಪುಣ್ಯವಂತರನ್ನಾಗಿ ಪರಿವರ್ತಿಸುತ್ತದೆ. ಆಡಂಬರಕ್ಕೆ ಬಲಿಯಾಗಬೇಡಿ. ಬಹಳಷ್ಟು ವಿದ್ಯಾರ್ಥಿಗಳು ಪ್ರೌಢಶಾಲೆಯ ನಂತರ ಸೃಜನಶೀಲತೆಯ ಚಿಂತನೆಗಳನ್ನು ಬಿಟ್ಟುಬಿಡುತ್ತಾರೆ. ಅಂತಹ ಸೀಮಿತತೆಗೆ ಒಳಗಾಗಬಾರದು. ಪರಿಸರದಲ್ಲಿ ಒಳ್ಳೆಯದನ್ನು ಬಿತ್ತುವ ಕಾರ್ಯವಾಗಬೇಕು. ಅಸಹಾಯಕರಿಗೆ ಸಹಾಯ ಮಾಡುವಲ್ಲಿ ನಿರತರಾಗಬೇಕು. ಬದುಕಿನ ವಾಸ್ತವತೆ ಒಪ್ಪಿಕೊಂಡು ಸಿರಿತನ ಬಡತನ ಎಲ್ಲವನ್ನೂ ಸ್ವೀಕರಿಸಬೇಕು ಎಂದರು.
ಎನ್‌ಇಎಸ್ ಆಜೀವ ಸದಸ್ಯ ಡಾ.ಎಸ್.ಟಿ.ಅರವಿಂದ, ನಿವೃತ್ತ ಸಂಸ್ಕೃತ ಉಪನ್ಯಾಸಕ ಜಿ.ಎಸ್.ನಟೇಶ್, ಕಸ್ತೂರಬಾ ಪಿಯು ಕಾಲೇಜಿನ ಪ್ರಾಚಾರ್ಯ ವೆಂಕಟೇಶ್ ಮಾತನಾಡಿದರು. ಉಪ ಪ್ರಾಚಾರ್ಯ ಸಿ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.