ಬಂದಿರುವ ಯೋಗವನ್ನು ಕನ್ನಡ ಚಿತ್ರರಂಗ ಉಳಿಸಿಕೊಂಡು ಹೋಗಲಿ: DK ಶಿವಕುಮಾರ್ ಕಿಡಿ

dk - 2025-03-04T193531.671
Published on

ಬೆಂಗಳೂರು: ನಾನು ಚಿತ್ರರಂಗದ ಒಳಿತಿಗಾಗಿ ಮಾತನಾಡಿದ್ದೇನೆ. ಒಂದೆರಡು ಸಿನಿಮಾಗಳಿಂದ ಕನ್ನಡ ಚಿತ್ರರಂಗಕ್ಕೆ ಉತ್ತಮ ಯೋಗ ಬಂದಿದೆ. ಬಂದಿರುವ ಯೋಗವನ್ನು ಉಳಿಸಿಕೊಂಡು ಹೋಗಿ ಎಂದು ಹೇಳುತ್ತಿದ್ದೇನೆ. ನಾನು ನನ್ನ ಹಿತವಚನವನ್ನು ಹಳ್ಳಿ ಭಾಷೆಯಲ್ಲಿ ಒರಟಾಗಿ ಹೇಳಿದ್ದೇನೆ. ನನಗೂ ಚಿತ್ರರಂಗ ಉಳಿಯಬೇಕು ಎನ್ನುವ ಆಸೆಯಿದೆ ಎಂದು ಡಿಸಿಎಂ DK ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

ಚಿತ್ರರಂಗದ ಬಗ್ಗೆ ನಿಮ್ಮ ಮಾತುಗಳು ಒರಟಾಗಿವೆ ಎನ್ನುವ ಬಿಜೆಪಿ, ಚಿತ್ರರಂಗದವರ ಟೀಕೆಯ ಬಗ್ಗೆ ಕೇಳಿದಾಗ, “ನನಗೆ ಬಣ್ಣ ಕಟ್ಟಿ ಮಾತನಾಡಲು ಬರುವುದಿಲ್ಲ. ನಾನು ನೇರವಾಗಿ ಹೇಳುತ್ತೇನೆ. ನೀವು (ಮಾಧ್ಯಮದವರು), ಅವರು ಬಂಡೆ ಎಂದು ಕರೆಯುತ್ತಾರೆ. ಹಾಗಾದರೆ ನಾನು ಬಂಡೆಯೇ? ನಾನು ಬಂಡೆಯಂತೇ ಕಾಣುತ್ತೇನೆಯೇ? ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಇದು ನನ್ನ ಮಾತಿನ ಶೈಲಿ. ಶೈಲಿ ಸರಿ ಇಲ್ಲದಿದ್ದರೆ ಸರಿಪಡಿಸಿಕೊಳ್ಳುತ್ತೇನೆ, ಆದರೆ ಸತ್ಯ ಹೇಳಿದ್ದೇನೆ ಎಂದರು.

ಹುಬ್ಬಳ್ಳಿಗೆ ಏಕೆ ಹೋದರು; ಬೆಂಗಳೂರಿಗೆ ನೀರು ತರುವ ಹೋರಾಟವಿದು

ರಾಜ್ಯದ ನೆಲ, ಜಲ ಭಾಷೆ ರಕ್ಷಣೆಗೆ ಹೋರಾಟ ಮಾಡಬೇಕು. ಹಾಗಾದರೆ ಕಳಸಾ- ಬಂಡೂರಿ ಹೋರಾಟಕ್ಕೆ ಚಿತ್ರರಂಗದವರು ಏಕೆ ಹುಬ್ಬಳ್ಳಿಗೆ ಹೋದರು? ರಾಜಕುಮಾರ್ ಅವರು ಪಕ್ಷ ಬೇಧ ಮರೆತು ಹೋರಾಟಕ್ಕೆ ಏಕೆ ಬರುತ್ತಿದ್ದರು? ಹಾಗಾದರೆ ಈಗಿನ ಚಿತ್ರರಂಗದ ಜವಾಬ್ದಾರಿ ಏನು? ರಾಜಕುಮಾರ್ ಅವರು ಇವರಿಗೆ ಮಾದರಿ ಅಲ್ಲವೇ ಎಂದು ಪ್ರಶ್ನಿಸಿದರು.

ದುನಿಯಾ ವಿಜಯ್, ಪ್ರೇಮ್, ಸಾಧು ಕೋಕಿಲ, ಸಾ.ರಾ. ಗೋವಿಂದು ಮತ್ತಿತರರು ಹೋರಾಟದಲ್ಲಿ ಭಾಗವಹಿಸಿದ್ದರು. ಇವರೆಲ್ಲಾ ಕಾಂಗ್ರೆಸ್ ಪಕ್ಷದಿಂದ ಬಂದಿದ್ದರೇ? ನನ್ನ ಮನೆಗೆ ನೀರು ತರಲು ಹೋರಾಟ ಮಾಡಲಿಲ್ಲ. ಇಡೀ ಬೆಂಗಳೂರಿಗೆ ನೀರು ತರಲು ಹೋರಾಟ ಮಾಡಿದ್ದೇವೆ. ಬೆಂಗಳೂರಲ್ಲಿ ಚಿತ್ರರಂಗದವರೂ ಇದ್ದಾರೆ. ಬರೀ ಕಾಂಗ್ರೆಸ್ ಕಾರ್ಯಕರ್ತರು ಇಲ್ಲ. ಚಿತ್ರಂಗದವರು ಬರದೇ ಇದ್ದರೂ ಹೋರಾಟ ಮಾಡುತ್ತೇವೆ. ರಾಜಕೀಯವಾಗಿ ಯಾರ್ಯಾರದ್ದು ಏನೆನಿದೆ ಎಂದು ನನಗೆ ತಿಳಿದಿಲ್ಲವೇ? ಇನ್ನಾದರೂ ಬುದ್ದಿ ಕಲಿಯಿರಿ ಎಂದಷ್ಟೇ ಹೇಳುತ್ತಿದ್ದೇನೆ. ತಗೊಳ್ಳೋದು ಬಿಡೋದು ಅವರಿಗೆ ಬಿಟ್ಟದ್ದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net