ಪ್ರೀತಮ್ ಗೌಡ ವಿರುದ್ಧ ತನಿಖೆ ಮುಂದುವರಿಯಲಿ

highcourt
Published on

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಪೆನ್‌ಡ್ರೈವ್ ಹಂಚಿಕೆ ಮಾಡಿದ ಆರೋಪ ಸಂಬಂಧ ಹಾಸನದ ಬಿಜೆಪಿ ಮಾಜಿ ಶಾಸಕ ಪ್ರೀತಮ್ ಗೌಡ ವಿರುದ್ಧ ತನಿಖೆ ಮುಂದುವರಿಯಬೇಕು ಎಂದು ಹೈಕೋರ್ಟ್ ಹೇಳಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಬೆಂಗಳೂರಿನ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ನಂತರದ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಪ್ರೀತಮ್ ಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಪ್ರೀತಮ್ ಗೌಡ ಪರ ವಕೀಲರು ವಾದ ಮಂಡಿಸಿ ಅರ್ಜಿಯನ್ನು ದಸರಾ ರಜೆ ಬಳಿಕ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು. ಬುಧವಾರಷ್ಟೆ ಅರ್ಜಿದಾರರು ವಿಚಾರಣೆಯಲ್ಲಿ ಭಾಗಿಯಾಗಿ, ಎಸ್‌ಐಟಿಯ ಮುಂದೆ ಹೇಳಿಕೆ ದಾಖಲಿಸಿದ್ದಾರೆ ಎಂದರು ಆಗ ಪೀಠವು ವಿಚಾರಣೆ ಮುಂದುವರಿಯಲಿ. ಇಲ್ಲಿಯವರೆಗೆ ತನಿಖೆ ಏನಾಗಿದೆ? ಎಂದು ಪ್ರಾಸಿಕ್ಯೂಷನ್‌ಗೆ ಪ್ರಶ್ನಿಸಿದರು.

ಈ ಮಧ್ಯೆ, ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮ ಕುಮಾರ್ ಅವರು ವಿಡಿಯೋಗಳಿಗೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗೆ ಕಾಯುತ್ತಿದ್ದೇವೆ. ಇದು ಡಿಜಿಟಲ್ ಅಪರಾಧ ಎಂದರು. ಆಗ ಪೀಠವು ವಿಚಾರಣೆಯನ್ನು ಅ.24ಕ್ಕೆ ನಿಗದಿಗೊಳಿಸಲಾಗಿದೆ. ಅಷ್ಟರಲ್ಲಿ ಎಫ್‌ಎಸ್‌ಎಲ್ ವರದಿ ಬರಬಹುದು ಎಂದರು. ಅಲ್ಲದೇ, ತನಿಖೆಗೆ ಸಮನ್ವಯ ಪೀಠವು ತಡೆ ನೀಡಿಲ್ಲ. ತನಿಖೆ ಮುಂದುವರಿಯಬೇಕು ಅದಕ್ಕೆ ಪ್ರೀತಮ್ ಗೌಡ ಸಹಕರಿಸಬೇಕು. ಬಂಧನದಿಂದ ರಕ್ಷಣೆ ಮಾಡಿರುವ ಆದೇಶ ಮುಂದುವರಿಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net