

ತಿ.ನರಸೀಪುರ: ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಖಾಸಗಿ ವೈದ್ಯರು ಮನೆಯಲ್ಲೇ ಕುಳಿತು ಕಾಲ ಕಳೆಯುತ್ತಿದ್ದು, ಇವರ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ತಾಲೂಕಿನ ಬನ್ನೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಕರೊನಾ ಸೇನಾನಿಗಳಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರೊನಾ ಸಂಕಷ್ಟದಲ್ಲಿ ಜನರ ರಕ್ಷಣೆಗೆ ನಿಲ್ಲಬೇಕಾದ ಖಾಸಗಿ ವೈದ್ಯರು ಹಾಗು ನರ್ಸಿಂಗ್ ಹೋಮ್‌ಗಳು ತಾವು ಕೈಲಾಗದವರು ಎಂಬಂತೆ ಆಸ್ಪತ್ರೆಗಳ ಬಾಗಿಲು ಮುಚ್ಚಿ ಕೂತಿದ್ದಾರೆ. ಆ ಮೂಲಕ ವೃತ್ತಿಧರ್ಮಕ್ಕೆ ಅವಮಾನ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿ ಕಾರಿದರು.
ಎಲ್ಲ ಖಾಸಗಿ ನರ್ಸಿಂಗ್ ಹೋಂಗಳು ಮತ್ತು ವೈದ್ಯರು ಕಡ್ಡಾಯವಾಗಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆದೇಶ ನೀಡಿದ್ದರು. ಇಂತಹ ನಿಯಮ ರಾಜ್ಯದಲ್ಲೂ ಜಾರಿ ಮಾಡಬೇಕು. ಒಂದು ವೇಳೆ ನಿಯಮ ಪಾಲಿಸದಿ ದ್ದರೆ ಸರ್ಟಿಫಿಕೇಟ್ ರದ್ದು ಮಾಡುವ ಎಚ್ಚರಿಕೆಯನ್ನು ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗುತ್ತಿದ್ದಾರೆ. ಇದರ ಹಿಂದೆ ವೈದ್ಯರ ಪರಿಶ್ರಮ ಇದೆ. ಜನತೆಯ ಪ್ರಾಣ ಉಳಿಸಲು ಅನೇಕ ವೈದ್ಯರು, ಪೊಲೀಸರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ತಮ್ಮ ಜೀವ ಒತ್ತೆ ಇಟ್ಟು ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದರು.
ಹಿರಿಯ ವೈದ್ಯಾಧಿಕಾರಿ ಡಾ.ರವಿಕುಮಾರ್, ಮಹಿಳಾ ವೈದ್ಯಾಧಿಕಾರಿ ಡಾ.ಶಾಲಿನಿ,ಮಕ್ಕಳ ತಜ್ಞ ಡಾ.ಪುರುಷೋತ್ತಮ್, ಉಪ ತಹಶೀಲ್ದಾರ್ ಆನಂದ್,ನೇತ್ರತಜ್ಞ ರಂಗಸ್ವಾಮಿ, ಔಷಧ ವಿಭಾಗದ ಅಕ್ಬರ್ ಆಲಿ, ಮುದ್ದು ಮಲ್ಲೇಶ್, ರಮೇಶ್, ಶುಶ್ರೂಷಕಿಯರಾದ ರಮ್ಯಾ, ,ಶಿಲ್ಪಾ, ಮುತ್ತಮ್ಮ, ಜಯಲಕ್ಷ್ಮೀ, ರೇಣುಕಾ, ಬೂದಪ್ಪ, ಇಂದಿರಾ ಮಣಿ ಅವರನ್ನು ಸನ್ಮಾನಿಸಲಾಯಿತು.
ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ರಕ್ತದಾನಿಗಳ ಸಂಘದ ಅಧ್ಯಕ್ಷ ಜಿ.ಕೆ.ನಯನ್ ಗೌಡ, ಎನ್.ಜಯರಾಂ, ರಂಗಸಮುದ್ರ ರೇವಣ್ಣ, ಚಾಮನಹಳ್ಳಿ ಸುರೇಶ್, ಅನಿಲ್ ಕುಮಾರ್,ಹನುಮನಾಳು ಜಗದೀಶ್, ರಾಘವೇಂದ್ರ, ಡಿ.ರಾಜು,ಎ.ಪಿ.ನವೀನ್,ಸಿ.ಲಿಂಗಣ್ಣ ಮತ್ತಿತರರಿದ್ದರು.