

ಶಿವಮೊಗ್ಗ: ಧೋಬಿಗಳನ್ನು ಗುರುತಿಸಿ ಅವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷೆ ಸುರೇಖಾ ಪಾಲಾಕ್ಷಪ್ಪ ಭರವಸೆ ನೀಡಿದರು.
ವಿದ್ಯಾನಗರದ ಧೋಬಿಘಾಟ್‌ನಲ್ಲಿ ಗುರುವಾರ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಈವರೆಗೆ ಯಾರೂ ದೋಬಿಗಳನ್ನು ಗುರುತಿಸಿರಲಿಲ್ಲ. ಆದರೆ ಇಂದು ನಮ್ಮ ಸಂಘಟನೆ ಅವರನ್ನು ಗುರುತಿಸಿ ಸಮಸ್ಯೆಗಳನ್ನು ಆಲಿಸಿದೆ. ಮಡಿವಾಳ ಸಮಾಜದ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಪರಿಹರಿಸಬೇಕು. ವಸತಿ ಇಲ್ಲದ ಅನೇಕರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮಡಿವಾಳ ಸಮಾಜದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಆ ಸಮಾಜದವರಿಗೆ ಆರೋಗ್ಯ ಸೇವೆ ಒದಗಿಸಬೇಕು. ರಾಸಾಯನಿಕಗಳನ್ನು ಬಳಸಿ ವಸ್ತ್ರಗಳನ್ನು ಶುದ್ಧಗೊಳಿಸುವುದರಿಂದ ಅನೇಕ ಚರ್ಮರೋಗಗಳು ತಗುಲುವ ಆತಂಕವಿದೆ. ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಧೋಬಿ ಕೆಲಸ ಮಾಡುವವರಿಗೆ ಅನೇಕ ಸಮಸ್ಯೆಗಳಿರುತ್ತವೆ. ಅವರು ಗ್ರಾಹಕರ ತೃಪ್ತಿಗೆ ತಕ್ಕಂತೆ ಕೆಲಸ ನಿರ್ವಹಿಸಬೇಕು. ವಸ್ತ್ರಗಳನು ್ನಸ್ವಚ್ಛ ಮಾಡಿಕೊಟ್ಟಾಗ ಮಾತ್ರ ನಾವು ಸುಂದರವಾಗಿ ಕಾಣುತ್ತೇವೆ. ಅವರೆಲ್ಲರೂ ಸಮಾಧಾನದಿಂದ ಕೆಲಸ ಮಾಡುತ್ತಾರೆ. 12ನೇ ಶತಮಾನದಲ್ಲಿ ಬಸವಣ್ಣನವರ ಕಾಲದಲ್ಲೇ ಮಡಿವಾಳ ಸಮಾಜಕ್ಕೆ ಬಹಳಷ್ಟು ಪ್ರಾಮುಖ್ಯತೆ ನೀಡಲಾಗಿತ್ತು ಎಂದರು.
ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಸಂಸ್ಥಾಪಕ ಕುಪೇಂದ್ರ ಆಯನೂರು, ಅಧ್ಯಕ್ಷ ಪ್ರದೀಪ್ ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಇಂದಿರಾ ಬಸವನಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಚಾಮುಂಡಿಪುರ. ಶಿವಮೊಗ್ಗ ನಗರಾಧ್ಯಕ್ಷ ವೈ.ಚಂದ್ರಶೇಖರ್, ಪ್ರಮುಖರಾದ ಅಶ್ವಿನಿ ಗೌಡ, ಪ್ರದೀಪ್ ಇತರರಿದ್ದರು.