ನಗರ ಹೋಬಳಿಗೆ ಸರ್ಕಾರ ಪ್ಯಾಕೇಜ್ ನೀಡಲಿ

hos kdp
ಹೊಸನಗರ ತಾಪಂನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಆರಗ ಜ್ಞಾನೇಂದ್ರ, ರಶ್ಮಿ ಹಾಲೇಶ್, ನರೇಂದ್ರಕುಮಾರ್ ಇದ್ದರು.
Published on

ಹೊಸನಗರ: ಚಕ್ರಾ ಜಲಾಶಯದಿಂದ ಬೇರೆ ಕಡೆಗಳಿಗೆ ಕುಡಿಯುವ ನೀರಿನ ಪೂರೈಕೆಗಾಗಿ 460 ಕೋಟಿ ರೂ. ವೆಚ್ಚದ ಕಾಮಗಾರಿ ಅನುಷ್ಠಾನಗೊಳ್ಳುತ್ತಿದೆ. ಇದಕ್ಕೆ ವಿರೋಧವಿಲ್ಲ. ಹಾಗೆಯೇ ಮುಳುಗಡೆಯಿಂದ ಸಮಸ್ಯೆಗೆ ಸಿಲುಕಿರುವವರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂಬ ಒತ್ತಾಯ ಸೋಮವಾರ ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೇಳಿಬಂದಿತು.

ಕೆಡಿಪಿ ಸದಸ್ಯೆ ಸುಮಾ ಸುಬ್ರಹ್ಮಣ್ಯ ಮಾತನಾಡಿ, ನಗರ ಹೋಬಳಿಯನ್ನು ಇತರ ಪ್ರದೇಶದೊಂದಿಗೆ ಹೋಲಿಸಬೇಡಿ. ಡ್ಯಾಂಗಾಗಿ ತ್ಯಾಗ ಮಾಡಿದ ಜನರು ಇಂದಿಗೂ ಸಮಸ್ಯೆಯಲ್ಲಿದ್ದಾರೆ. ಇದೀಗ ಚಕ್ರಾದಿಂದ ನೀರನ್ನು ಕೊಂಡೊಯ್ಯುವ ಕಾಮಗಾರಿ ಕೂಡ ಆರಂಭವಾಗಿದೆ. ಜಲಾಶಯ ನಿರ್ಮಾಣದಿಂದ ಹಿಡಿದು ಸರ್ಕಾರದ ಎಲ್ಲ ಯೋಜನೆಗೂ ಸಹಕಾರ ನೀಡಿ ಅತಂತ್ರ ಸ್ಥಿತಿಯಲ್ಲಿದೆ. ಇದನ್ನೆಲ್ಲ ಪರಿಗಣಿಸಿ ನಗರ ಹೋಬಳಿಯನ್ನು ವಿಶೇಷವಾಗಿ ಪರಿಗಣಿಸಿ ಪ್ಯಾಕೇಜ್ ಬಿಡುಗಡೆ ಮಾಡಲು ಸರ್ಕಾರವನ್ನು ಒತ್ತಾಯಿಸುವಂತೆ ಶಾಸಕರಿಗೆ ಮನವಿ ಮಾಡಿದರು.

ಸಭೆಯಲ್ಲಿ ಪಡಿತರ ವ್ಯವಸ್ಥೆ, ಅರಣ್ಯ ಸಮಸ್ಯೆ, ಅಡಕೆಗೆ ಬಣ್ಣ ಮಿಶ್ರಣ, ನನೆಗುದಿಗೆ ಬಿದ್ದಿರುವ ಹೊಸನಗರ ಬಸ್ ನಿಲ್ದಾಣದ ಮಹಡಿ, ಬೆಳೆ ವಿಮೆ ಸಮಸ್ಯೆ, ನಗರ ಆಸ್ಪತ್ರೆ ಸಮಸ್ಯೆ ಸೇರಿ ಹಲವು ವಿಚಾರಗಳನ್ನು ಚರ್ಚಿಸಲಾಯಿತು. ಈ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

82 ಗ್ರಾಮದಲ್ಲಿ ರುದ್ರಭೂಮಿ ಇಲ್ಲ: ತಾಲೂಕಿನ 82 ಗ್ರಾಮಗಳಲ್ಲಿ ಇಂದಿಗೂ ಸ್ಮಶಾನಗಳಿಲ್ಲ. ಬಟ್ಟೆಮಲ್ಲಪ್ಪದಂತಹ ಪ್ರದೇಶದಲ್ಲಿ ಹೆಣ ಇಟ್ಟುಕೊಂಡು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲೋ ಒಂದುಕಡೆ ಅಂತ್ಯಕ್ರಿಯೆಗೆ ಮುಂದಾದರೆ ಅರಣ್ಯ ಇಲಾಖೆ ತಕರಾರು. ಈ ನಡುವೆ ಜನರು ಏನು ಮಾಡಬೇಕು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್ ಪ್ರಶ್ನಿಸಿದರು.

ಹೊಸದಾಗಿ ನೇಮಕಗೊಂಡ ನಾಮನಿರ್ದೇಶಿತ ಸದಸ್ಯರನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಸನ್ಮಾನಿಸಿದರು. ತಹಸೀಲ್ದಾರ್ ರಶ್ಮಿ ಹಾಲೇಶ್, ತಾಪಂ ಇಒ ನರೇಂದ್ರಕುಮಾರ್, ಆಡಳಿತಾಧಿಕಾರಿ ಜಯಲಕ್ಷ್ಮಮ್ಮ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ವಿ.ಜಯರಾಂ, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ್, ಸದಸ್ಯರಾದ ನಾಗೇಂದ್ರ ಜೋಗಿ, ಮಂಜಪ್ಪ, ಗುರುರಾಜ್, ರಫೀಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net