ಸರ್ಕಾರ ಖಾದಿ ಉದ್ಯಮಕ್ಕೆ ಪ್ರೋತ್ಸಾಹ ನೀಡಲಿ

(Neeralkeri)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರ ಧಾರವಾಡ ತಾಲೂಕಿನ ಗರಗ ಗ್ರಾಮದ ಖಾದಿ ಗ್ರಾಮೋದ್ಯೋಗ ಗುರುತಿಸಿ ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ ಗಾಂಧಿ ಪುರಸ್ಕಾರ ನೀಡಿರುವುದು ಸ್ವಾಗತ. ಅದೇ ರೀತಿ ಸರ್ಕಾರ ರಾಜ್ಯಾದ್ಯಂತ ಖಾದಿ ಉದ್ಯಮ ಪ್ರೋತ್ಸಾಹಿಸಲು ಅಲ್ಲಿನ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸಿ ಪ್ರೋತ್ಸಾಹಿಸಬೇಕು ಎಂದು ಕಾಂಗ್ರೆಸ್ ಮುಖಂಡ ಪಿ.ಎಚ್. ನೀರಲಕೇರಿ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 30 ಸಾವಿರಕ್ಕೂ ಅಧಿಕ ಜನರು ಖಾದಿ ಗ್ರಾಮೋದ್ಯೋಗದಲ್ಲಿ ಕೆಲಸ ಮಾಡುತ್ತಿದ್ದು, ಸರಿಯಾದ ವೇತನವಿಲ್ಲದೆ ಅನ್ಯ ಕೆಲಸಗಳತ್ತ ಹೋಗುತ್ತಿದ್ದಾರೆ. ಕೆಲವರು ಅದೇ ಕೆಲಸ ಮಾಡುಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಖಾದಿ ಕ್ಷೇತ್ರಕ್ಕೆ ಸರ್ಕಾರ ಸೂಕ್ತ ಅನುದಾನ ನೀಡದ ಕಾರಣ ಉದ್ಯಮ ಸಂಕಷ್ಟದಲ್ಲಿವೆ. ಹೀಗಾಗಿ ಸರ್ಕಾರ ಗಮನ ವಹಿಸಿ ಗ್ರಾಮೋದ್ಯೋಗದ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಖಾದಿ ಉತ್ಪಾದನೆ ಜತೆಗೆ ನಮ್ಮ ಸ್ವಾತಂತ್ರೃದ ಭಾವನೆ ಇದೆ. ಆದರೆ ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಯೋಜನೆ ಹೆಸರಲ್ಲಿ ಖಾದಿ ಉದ್ಯಮಕ್ಕೆ ಅನ್ಯಾಯ ಮಾಡಿದೆ. ರಾಜ್ಯ ಸರ್ಕಾರ ಪ್ರತಿ ಇಲಾಖೆಯಲ್ಲಿ ವಾರದ ಒಂದು ದಿನ ಖಾದಿ ಬಟ್ಟೆ ಧರಿಸಲು ಆದೇಶಿಸಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕನಿಷ್ಠ ವೇತನ ನೀಡುವ ಭರವಸೆ ನೀಡಿತ್ತು. ಅದನ್ನು ಜಾರಿಗೊಳಿಸಿ ಖಾದಿ ಕೆಲಸಗಾರರಿಗೆ ನ್ಯಾಯ ಒದಗಿಸಬೇಕು ಎಂದರು.
ಖಾದಿ ಗ್ರಾಮೋದ್ಯೋಗಕ್ಕೆ ಬೆಂಬಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೀಘ್ರದಲ್ಲಿ ನಿಯೋಗದೊಂದಿಗೆ ಭೇಟಿ ಮಾಡಿ ಮನವರಿಕೆ ಮಾಡಿ, ಅನ್ಯಾಯ ಸರಿಪಡಿಸಲು ಒತ್ತಾಯಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net