ಅಭಿವೃದ್ಧಿಯ ದಿಕ್ಕು ಬದಲಾಗಲಿ; 2-3ನೇ ಹಂತದ ನಗರಗಳತ್ತ ಗಮನವಹಿಸಿ

vbnvbnvbnvbnvbn
Published on

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇತರ ಉದ್ದಿಮೆಗಳ ಫಲವಾಗಿ ಬೆಂಗಳೂರು ಅಂತಾರಾಷ್ಟ್ರೀಯ ನಕ್ಷೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಇಲ್ಲಿನ ಹವಾಮಾನ, ಕೌಶಲ, ಇತರ ಸವಲತ್ತುಗಳನ್ನು ಗಮನಿಸಿ ಹೂಡಿಕೆದಾರರು ಕೂಡ ಈ ನಗರದತ್ತ ಆಕರ್ಷಿತರಾಗುತ್ತಿದ್ದಾರೆ. ಎಲ್ಲ ರಂಗಗಳಲ್ಲೂ ಅವಕಾಶಗಳನ್ನು ಸೃಷ್ಟಿಸುವ, ವಲಸಿಗರ ನೆಚ್ಚಿನ ತಾಣ ಎಂಬ ಹಿರಿಮೆಗೂ ಬೆಂಗಳೂರು ಪಾತ್ರವಾಗಿರುವುದು ಸರಿಯೇ. ಅಭಿವೃದ್ಧಿಯ ಈ ನಾಗಾಲೋಟ ಮುಂದುವರಿದಂತೆ ದೇಶದ ಬೇರೆ-ಬೇರೆ ರಾಜ್ಯಗಳ, ವಿದೇಶಗಳ ಜನರೂ ಇಲ್ಲಿ ಬಂದು ನೆಲೆಸಿದ್ದಾರೆ.

ಜಾಗತೀಕರಣ, ಉದಾರೀಕರಣದ ಈ ಹೊತ್ತಲ್ಲಿ ಇಂಥ ಬೆಳವಣಿಗೆಗಳು ಸ್ವಾಭಾವಿಕವೇ. ಅದರಲ್ಲೂ, ಬೆಂಗಳೂರು ತನ್ನದೇ ವರ್ಚಸ್ಸನ್ನು ಸ್ಥಾಪಿಸಿಕೊಂಡಿರುವುದರಿಂದ, ಈಗ ದಟ್ಟಣೆಯ ನಗರವೂ ಆಗಿ ಬದಲಾಗಿದೆ. ಜನಸಂಖ್ಯೆ 1.30 ಕೋಟಿಯನ್ನು ದಾಟಿದ್ದು, ಮೂಲಸೌಕರ್ಯಗಳ ಕೊರತೆ ಸೃಷ್ಟಿಯಾಗಿದೆ. ಅತಿಯಾದ ವಾಹನ ದಟ್ಟಣೆ ಜನರ ಬಹುಮೂಲ್ಯ ಸಮಯವನ್ನು ಕಿತ್ತುಕೊಳ್ಳುತ್ತಿದೆ. ಗಾಳಿ ಕಲುಷಿತವಾಗಿದೆ. ಈಗ ನೀರಿನ ಸಮಸ್ಯೆಯೂ ಗಂಭೀರ ಸ್ವರೂಪ ಪಡೆಯುತ್ತಿರುವುದು ಶೋಚನೀಯ ಸಂಗತಿ.

ರಾಜಧಾನಿಗೆ ಕಾವೇರಿ ಐದನೇ ಹಂತದ ಯೋಜನೆಯಿಂದ 2030ರವರೆಗೆ ಮಾತ್ರ ನೀರು ಒದಗಿಸಲು ಸಾಧ್ಯವಿದ್ದು, ಮತ್ತೊಂದು ಹೊಸ ಯೋಜನೆ ಕೈಗೆತ್ತಿಕೊಳ್ಳದಿದ್ದರೆ ನೀರಿನ ಬರ ಆವರಿಸುವುದು ಖಚಿತ ಎಂದು ತಜ್ಞರು ಎಚ್ಚರಿಸಿದ್ದಾರೆ. ನಗರದ 110 ಹಳ್ಳಿ ವ್ಯಾಪ್ತಿಯ ಅಂದಾಜು 3.5 ಲಕ್ಷಕ್ಕೂ ಅಧಿಕ ಕುಟುಂಬಗಳು ನೀರಿಲ್ಲದೆ ಪರದಾಡುತ್ತಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ಸರ್ಕಾರದ ಮುಂದೆ ಎತ್ತಿನಹೊಳೆ, ಮೇಕೆದಾಟು, ಕೃಷ್ಣಾ, ಶರಾವತಿ ಹಿನ್ನೀರು ಸಂಬಂಧಿತ ಯೋಜನೆಗಳು ಇವೆಯಾದರೂ, ಇವುಗಳ ಅನುಷ್ಠಾನ ಅಂದುಕೊಂಡಷ್ಟು ಸುಲಭವಲ್ಲ. 2030ರ ಹೊತ್ತಿಗೆ ಬೆಂಗಳೂರು ನೀರಿನ ತೀವ್ರ ಬರವನ್ನು ಎದುರಿಸಬೇಕಾಗುತ್ತದೆ ಎಂಬ ತಜ್ಞರ ಎಚ್ಚರಿಕೆಯನ್ನು ಕಡೆಗಣಿಸುವಂತಿಲ್ಲ.

ಬೆಂಗಳೂರು ಅವಕಾಶಗಳ ಆಗರ ಎಂಬುದನ್ನು ಅಲ್ಲಗಳೆಯುವಂತಿಲ್ಲವಾದರೂ, ಯಾವುದೇ ನಗರಕ್ಕೂ ತನ್ನದೇ ಆದ ಧಾರಣಾ ಸಾಮರ್ಥ್ಯ ಇರುತ್ತದೆ. ಈ ಸಾಮರ್ಥ್ಯ ಮೀರಿದರೆ ನಗರವು ತನ್ನ ಮೂಲಸ್ವರೂಪ ಕಳೆದುಕೊಂಡು, ಸಮಸ್ಯೆಗಳ ಸುಳಿಯಲ್ಲಿ ಸಿಲುಕುತ್ತದೆ ಅಷ್ಟೇ. ಬೆಂಗಳೂರು ಸಾಗುತ್ತಿರುವ ದಿಕ್ಕನ್ನು ಗಮನಿಸಿದರೆ ಹಲವು ಸಮಸ್ಯೆಗಳು ಸ್ಪಷ್ಟಗೋಚರ. ಹಾಗಾಗಿ, ಆಳುಗರು ಅಭಿವೃದ್ಧಿಯ ದಿಕ್ಕನ್ನೇ ಕೊಂಚ ಬದಲಿಸುವ ಅಗತ್ಯವಿದೆ. ಅಂದರೆ, ಎರಡನೇ, ಮೂರನೇ ಹಂತದ ನಗರಗಳು ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಹಲವು ಅವಕಾಶಗಳನ್ನು ಹೊಂದಿದ್ದು, ಅತ್ತ ಗಮನ ಹರಿಸಬೇಕಾಗಿದೆ. ಕೈಗಾರಿಕೆಗಳು, ಇತರ ಕಾರ್ಯಕ್ರಮಗಳು ಇಂಥ ನಗರಗಳಲ್ಲಿ ಸ್ಥಾಪಿತವಾದರೆ, ಬೆಂಗಳೂರು ಮೇಲಿನ ಅತಿ ಅವಲಂಬನೆಯೂ ತಪು್ಪತ್ತದೆ. ಇತರ ನಗರಗಳು ಅಭಿವೃದ್ಧಿಯ ಬೆಳಕು ಕಾಣುವಂತಾಗಿ, ಜನರಿಗೂ ಅನುಕೂಲವಾಗುತ್ತದೆ. ಇಂಥ ನೀತಿಯತ್ತ ಆಳುಗರು ಗಮನ ಹರಿಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net