ಸಂಪಾದಕೀಯ: ದೇಶ ಒಗ್ಗಟ್ಟು ಪ್ರದರ್ಶಿಸಲಿ

ವಿಜಯವಾಣಿ (3)
Published on

ಜಮ್ಮು-ಕಾಶ್ಮೀರದ ಪಹಲ್ಗಾಮಿನಲ್ಲಿ  ನಡೆದ ಭಯೋತ್ಪಾದಕ ದಾಳಿಯಿಂದ ದೇಶ ಶೋಕದಲ್ಲಿದೆ. ಇಬ್ಬರು ಸ್ಥಳೀಯರು ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಉತ್ತರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ರಾಜ್ಯಗಳ ಮತ್ತು ನೇಪಾಳ, ಯುಎಇಯ ತಲಾ ಒಬ್ಬರಂತೆ 26 ಪ್ರವಾಸಿಗರನ್ನು ಭಯೋತ್ಪಾದಕರು ಹೆಸರು ಮತ್ತು ಧರ್ಮವನ್ನು ಕೇಳಿ ಕೊಂದು ಹಾಕಿದ್ದಾರೆ.

ಪ್ರವಾಸಿಗರ ಸ್ವರ್ಗ ಎಂದು ಕರೆಯಲಾಗುವ ಕಾಶ್ಮೀರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಪ್ರವಾಸಿಗರನ್ನು ಈ ರೀತಿ ಹತ್ಯೆ ಮಾಡಿರುವುದು ಹೇಡಿತನ. ಇದು ಬರೀ ಒಂದು ಉಗ್ರ ದಾಳಿಯಲ್ಲ. ದೇಶದ ಏಕತೆ, ಅಖಂಡತೆ ಮೇಲೆ ನಡೆದಿರುವ ದಾಳಿ. 35 ವರ್ಷಗಳ ನಂತರ ಮಂಗಳವಾರ ಜಮ್ಮು-ಕಾಶ್ಮೀರ ಬಂದ್ ಮಾಡಿ, ಕೃತ್ಯವನ್ನು ಖಂಡಿಸಲಾಗಿದೆ. ಈ ಸಂದರ್ಭದಲ್ಲಿ ದೇಶ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ ಮತ್ತು ಭಯೋತ್ಪಾದನೆ ವಿರುದ್ಧ ಹೋರಾಟದ ಸಂಕಲ್ಪ ಇನ್ನಷ್ಟು ದೃಢಗೊಳ್ಳಬೇಕಿದೆ. ಆದರೆ, ಕೆಲ ರಾಜಕೀಯ ಪಕ್ಷಗಳು ಆರೋಪ- ಪ್ರತ್ಯಾರೋಪದಲ್ಲಿ ತೊಡಗಿರುವುದು, ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಕೂಡ ವಿವೇಚನೆ ಮರೆತು ಮಾತನಾಡಿರುವುದು ದುರದೃಷ್ಟಕರ.

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ, ‘ಜಮ್ಮು-ಕಾಶ್ಮೀರದಿಂದ 370ನೇ ವಿಧಿ ಹಿಂಪಡೆದು ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದು ಮತ್ತು ದೇಶದಲ್ಲಿ ಮುಸಲ್ಮಾನರು ಅಸಹಾಯಕತೆ ಅನುಭವಿಸುತ್ತಿರುವುದು ಈ ದಾಳಿಗೆ ಕಾರಣ’ ಎಂದಿದ್ದರೆ ಶಿವಸೇನಾ (ಉದ್ಧವ್ ಬಣ) ನಾಯಕ ಸಂಜಯ್ ರಾವುತ್, ‘ದಾಳಿಗೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ’ ಎಂದಿದ್ದಾರೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕೂಡ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ದೇಶದ ಹಿತ, ಜನರಲ್ಲಿ ಆತ್ಮಸ್ಥೈರ್ಯ ತುಂಬುವಂಥ ಸಂವೇದನೆ, ಸಂಕಷ್ಟವನ್ನು ಒಟ್ಟಾಗಿ ಎದುರಿಸಿ, ಪರಿಹಾರ ಕಂಡುಕೊಳ್ಳುವ ಇಚ್ಛಾಶಕ್ತಿಗಿಂತ ಇವರಿಗೆಲ್ಲ ರಾಜಕೀಯ ಲಾಭವೇ ಮುಖ್ಯವಾಗಿ ಕಾಣುತ್ತಿರುವುದು ಅತ್ಯಂತ ದುರ್ದೈವದ ಸಂಗತಿ ಮತ್ತು ಯಾವುದೇ ಕಠಿಣ, ದುಃಖಕರ ಪ್ರಸಂಗವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಲಜ್ಜೆಗೇಡಿತನ.

ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಇತರ ದೇಶಗಳು ತೋರಿದ ರಾಜಕೀಯ ಒಗ್ಗಟ್ಟನ್ನು, ಪ್ರಬಲ ಇಚ್ಛಾಶಕ್ತಿಯನ್ನು ನಮ್ಮಲ್ಲಿ ನಾಯಕರೆನಿಸಿಕೊಂಡವರು ಗಮನಿಸಬೇಕು. ಹಮಾಸ್ ಉಗ್ರ ಸಂಘಟನೆಯ ವಿರುದ್ಧ ಇಸ್ರೇಲ್ ಪ್ರಬಲವಾಗಿ ಹೋರಾಡುತ್ತಿದೆ. ಪಾಕಿಸ್ತಾನದಲ್ಲಿ ಅಡಗಿದ್ದ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್​ನನ್ನು ಹೊಡೆದುರುಳಿಸುವವರೆಗೂ ಅಮೆರಿಕ ವಿಶ್ರಮಿಸಲಿಲ್ಲ.

ಆದರೆ, ಭಾರತದಲ್ಲಿ ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಈ ರಾಜಕೀಯ ಒಗ್ಗಟ್ಟು ಕಾಣಬೇಕಿದೆ. ತುರ್ತು ಕ್ರಮವಾಗಿ ಕೇಂದ್ರ ಸರ್ಕಾರ ಭಾರತದಲ್ಲಿರುವ ಪಾಕಿಸ್ತಾನಿಯರ ವೀಸಾವನ್ನು ರದ್ದುಗೊಳಿಸಿ, 48 ಗಂಟೆಯೊಳಗೆ ದೇಶ ಬಿಡುವಂತೆ ಸೂಚಿಸಿದೆ. ಪಾಕಿಸ್ತಾನದಲ್ಲಿನ ಭಾರತೀಯ ರಾಯಭಾರ ಕಚೇರಿ ಮತ್ತು ಭಾರತದಲ್ಲಿನ ಪಾಕ್ ರಾಯಭಾರ ಕಚೇರಿ ಮುಚ್ಚಲು ತೀರ್ವನಿಸಿದೆ. ಗಂಭೀರ ಸಮಸ್ಯೆಗಳ ವಿರುದ್ಧ ಹೋರಾಡಲು ಕಠಿಣ ನಿರ್ಧಾರಗಳು ಅಗತ್ಯ ಎಂಬುದನ್ನು ಮನಗಾಣಬೇಕು. ಭಾರತ ಭಯೋತ್ಪಾದನೆ ವಿರುದ್ಧ ನಡೆಸುತ್ತಿರುವ ಸಮರಕ್ಕೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಬೆಂಬಲ ವ್ಯಕ್ತವಾಗುತ್ತಿದ್ದು, ಉಗ್ರಜಾಲವನ್ನು ಕಿತ್ತೊಗೆಯಲು ಮತ್ತು ಇದನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಇದು ಸಕಾಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net