ಸಂಪಾದಕೀಯ | ವಿವಾದ ಕೊನೆಗೊಳ್ಳಲಿ

ವಿಜಯವಾಣಿ (2)
Published on

ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕುಟುಂಬಸಮೇತ ಸೋಮವಾರ ಭಾರತ ಭೇಟಿಗೆ ಬಂದಿದ್ದಾರೆ. ಇಂದು (ಮಂಗಳವಾರ) ಮಹತ್ವದ ಒಪ್ಪಂದಗಳು ಏರ್ಪಡುವ ನಿರೀಕ್ಷೆ ಇದೆ. ದ್ವಿಪಕ್ಷೀಯ ಮಾತುಕತೆಗಳು ಆರಂಭಗೊಂಡಿವೆ. ಇದೇ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಮೆರಿಕ ಪ್ರವಾಸದಲ್ಲಿದ್ದು, ಅಲ್ಲಿನ ಸಚಿವರ ಜತೆ ಸಮಾಲೋಚನೆ ನಡೆಸುತ್ತಿದ್ದಾರೆ. ‘ಅಮೆರಿಕದ ಜತೆ ಭಾರತದ ಅಧಿಕಾರಿಗಳ ವ್ಯಾಪಾರ ಮಾತುಕತೆ ಮುಂದುವರಿದಿದ್ದು ಈ ವರ್ಷದ ಸೆಪ್ಟೆಂಬರ್, ಅಕ್ಟೋಬರ್ ಒಳಗೆ ಮೊದಲ ಹಂತದ ದ್ವಿಪಕ್ಷೀಯ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ’ ಎಂದು ನಿರ್ಮಲಾ ಹೇಳಿದ್ದಾರೆ.

ವಿಶ್ವದ ಹಳೆಯ ಪ್ರಜಾಪ್ರಭುತ್ವ ಮತ್ತು ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಅಮೆರಿಕ ಹಾಗೂ ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧಗಳು ಸೌಹಾರ್ದದಿಂದ ಕೂಡಿವೆ. ಭಾರತ ಮತ್ತು ಅಮೆರಿಕ ರಾಜತಾಂತ್ರಿಕವಾಗಿ ಉತ್ತಮ ಸಂಬಂಧ ಹೊಂದಿದ್ದು, ಇತ್ತೀಚಿನ ವರ್ಷಗಳಲ್ಲಂತೂ ಘನಿಷ್ಠ ಮೈತ್ರಿ ಏರ್ಪಟ್ಟಿದೆ. ಅಲ್ಲದೆ, ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ತಹವ್ವುರ್ ರಾಣಾನನ್ನು ಅಮೆರಿಕ ಭಾರತಕ್ಕೆ ಹಸ್ತಾಂತರಿಸಿದೆ. ಇದೇ ವರ್ಷದ ಜನವರಿಯಲ್ಲಿ ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರನ್ನು ಭೇಟಿ ಮಾಡಿದ್ದರು ಮತ್ತು ಈ ವೇಳೆ ಭಾರತ-ಅಮೆರಿಕ ಗಟ್ಟಿ ಸಹಭಾಗಿತ್ವಕ್ಕಾಗಿ ನೀಲಿನಕ್ಷೆ ರೂಪಿಸಲಾಗಿತ್ತು. ವ್ಯಾನ್ಸ್ ಈಗ ಅದೇ ನೀಲಿನಕ್ಷೆ ಆಧಾರದಲ್ಲಿ ಮಾತುಕತೆ ನಡೆಸಿದ್ದಾರೆ. ಉಭಯ ರಾಷ್ಟ್ರಗಳ ನಡುವೆ ರಕ್ಷಣೆ, ಇಂಧನ ಕ್ಷೇತ್ರದಲ್ಲಿ ಸಹಕಾರ ಹೆಚ್ಚಿದೆ ಎಂಬುದು ಗಮನಾರ್ಹ.

ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಧ್ಯಕ್ಷರಾಗುತ್ತಿದ್ದಂತೆ ತೆಗೆದುಕೊಂಡ ಕಠಿಣ ನಿರ್ಧಾರಗಳು, ಡಿಢೀರನೆ ಅನುಸರಿಸಿದ ನಿಲುವುಗಳ ಪರಿಣಾಮ ಒಂದಿಷ್ಟು ಗೊಂದಲ ಏರ್ಪಟ್ಟಿದೆ ಎಂಬುದು ವಾಸ್ತವ. ಮುಖ್ಯವಾಗಿ, ಅಮೆರಿಕಕ್ಕೆ ಬರುವ ಸರಕುಗಳ ಮೇಲೆ ಪರಸ್ಪರ ತೆರಿಗೆ ಹೇರಿರುವುದು. ಭಾರತದ ಮೇಲೆ ಶೇಕಡ 26ರಷ್ಟು ಪರಸ್ಪರ ತೆರಿಗೆ ವಿಧಿಸುವ ನಿರ್ಧಾರ ಕೈಗೊಂಡಿದ್ದ ಟ್ರಂಪ್, ಅದನ್ನು ಜುಲೈವರೆಗೆ ಮುಂದೂಡಿದ್ದಾರೆ. ಆದರೂ, ಈ ಬಗೆಯ ಅನಿಶ್ಚಿತತೆ ದೀರ್ಘಕಾಲ ಮುಂದುವರಿಯುವುದು ಸೂಕ್ತವಲ್ಲ. ಭಾರತ-ಅಮೆರಿಕ ನಡುವೆ ಮೈತ್ರಿ ಗಾಢವಾಗಿದೆ. ಹೀಗಾಗಿ, ಈ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ವಿಶ್ವಾಸ ಕೇಂದ್ರ ಸರ್ಕಾರದ್ದು. ಈ ನಿಟ್ಟಿನಲ್ಲಿ ಮಾತುಕತೆ ಈಗಾಗಲೇ ಆರಂಭಗೊಂಡಿದ್ದು, ‘ವ್ಯಾಪಾರ ಸಮರ’ದ ಬಿಸಿ ಭಾರತಕ್ಕೆ ತಟ್ಟದಂತೆ ನಿಗಾ ವಹಿಸಲಾಗಿದೆ. ಆದರೆ, ಟ್ರಂಪ್ ಮತ್ತೆ ಪರಸ್ಪರ ತೆರಿಗೆಯನ್ನು ಮುಂದುವರಿಸುವ ನಿರ್ಧಾರ ಕೈಗೊಂಡರೆ ನಷ್ಟ ತಪ್ಪಿದ್ದಲ್ಲ ಎಂಬ ಆತಂಕ ಕಾಡುತ್ತಿದೆ.

‘ಭಾರತ-ಮಧ್ಯಪ್ರಾಚ್ಯ-ಯೂರೋಪ್ ಕಾರಿಡಾರ್’ ನಿರ್ವಿುಸುವ ಬದ್ಧತೆ ಪುನರುಚ್ಚರಿಸಿರುವ ಅಮೆರಿಕ ಈ ನಿಟ್ಟಿನಲ್ಲಿ ವ್ಯಾಪಾರ ನೀತಿಯ ಗೊಂದಲಗಳನ್ನು ನಿವಾರಿಸುವುದು ಅಗತ್ಯ. ‘ಭಾರತ ಮತ್ತು ಅಮೆರಿಕ ನಡುವಿನ ಸಹಕಾರವು ಉಭಯ ರಾಷ್ಟ್ರಗಳ ಪ್ರಗತಿಯ ಜೊತೆಗೆ ಉತ್ತಮ ಜಗತ್ತನ್ನು ರೂಪಿಸಲಿದೆ’ ಎಂದು ಪ್ರಧಾನಿ ಮೋದಿ ಅಮೆರಿಕ ಭೇಟಿ ವೇಳೆ ಹೇಳಿದ್ದರು. ಈ ಆಶಯ ಈಡೇರುವ ನಿಟ್ಟಿನಲ್ಲಿ ಎರಡೂ ರಾಷ್ಟ್ರಗಳು ಪ್ರಯತ್ನ ಮಾಡಲಿ. ವಿವಾದ ಕೊನೆಗೊಂಡು, ವಾಣಿಜ್ಯ ಮೈತ್ರಿಯೂ ದೃಢಗೊಳ್ಳಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net