

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಪಾರಸ್ಪರಿಕ ತೆರಿಗೆಗಳು ಏಪ್ರಿಲ್ 9ರ ಮಧ್ಯರಾತ್ರಿ 12ರ ನಂತರ ಜಾರಿಗೆ ಬರಲಿವೆ. ಅದಾಗಲೇ, ಟ್ರಂಪ್ ವಿರುದ್ಧ ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಪ್ರತಿಭಟನೆ ತಾರಕಕ್ಕೆ ಏರಿದೆ. ಜನರು ಈ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸುತ್ತಿದ್ದಾರೆ. ಆದರೆ, ‘ಈ ಕ್ರಮ ಹಲವು ದಶಕಗಳ ಹಿಂದೆಯೇ ತೆಗೆದುಕೊಳ್ಳಬೇಕಿತ್ತು. ಜನರು ಧೈರ್ಯಗೆಡದೆ ಬಲಶಾಲಿಗಳಾಗಬೇಕು’ ಎಂದು ಟ್ರಂಪ್ ತಮ್ಮ ನಿರ್ಣಯವನ್ನು ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪಾರಸ್ಪರಿಕ ತೆರಿಗೆ ಒಂದು ವಿಧದದಲ್ಲಿ ಕಹಿಗುಳಿಗೆಯಂತಿದ್ದು, ಅಮೆರಿಕನ್ ಆರ್ಥಿಕತೆಯ ಚೇತರಿಕೆಗೆ ಇದು ಅನಿವಾರ್ಯ ಎಂದಿದ್ದಾರೆ.
ಅದೇನಿದ್ದರೂ, ಟ್ರಂಪ್ ನಿರ್ಧಾರದಿಂದ ಅಮೆರಿಕ ಮಾತ್ರವಲ್ಲ ಇತರ ದೇಶಗಳೂ ನಲುಗುವಂತೆ ಆಗಿದೆ. ಈ ಮಧ್ಯೆ ಅಮೆರಿಕಕ್ಕೆ ಸೆಡ್ಡು ಹೊಡೆದಿರುವ ಚೀನಾ ಪ್ರತೀಕಾರದ ಕ್ರಮವಾಗಿ ಶೇ.34ರಷ್ಟು ತೆರಿಗೆ ಘೋಷಿಸಿದೆ. ಟ್ರಂಪ್ ಹೇರಿರುವ ಪಾರಸ್ಪರಿಕ ತೆರಿಗೆಯಿಂದ ಭಾರತದಲ್ಲೂ ಕಂಪನ ಸೃಷ್ಟಿಯಾಗಿದೆ. ಭಾರತವು ಬಟ್ಟೆ, ಔಷಧ, ವಾಹನದ ಬಿಡಿಭಾಗಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಅಮೆರಿಕಕ್ಕೆ ರಫ್ತು ಮಾಡುತ್ತದೆ. ಆದರೆ, ಟ್ರಂಪ್ ಈಗ ಶೇಕಡ 26ರಷ್ಟು ಪಾರಸ್ಪರಿಕ ತೆರಿಗೆ ವಿಧಿಸಿರುವುದರಿಂದ ಈ ಉತ್ಪನ್ನಗಳ ಬೆಲೆ ಅಮೆರಿಕದಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಆದ್ದರಿಂದ ಅಮೆರಿಕದ ಗ್ರಾಹಕರು ಬೇರೆ ಆಯ್ಕೆಗಳ ಕಡೆ ಮುಖ ಮಾಡಬಹುದು. ಇಂಥ ಸ್ಥಿತಿಯಲ್ಲಿ ಭಾರತವು ಕ್ಷಿಪ್ರವಾಗಿ ಸೂಕ್ತ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅಲ್ಲದೆ, ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಮೇಲೆ ಟ್ರಂಪ್ ತೆರಿಗೆ ತುಂಬ ಅಡ್ಡ ಪರಿಣಾಮವನ್ನು ಉಂಟು ಮಾಡುವುದಿಲ್ಲ.
ಭಾರತದ ಆಂತರಿಕ ಮಾರುಕಟ್ಟೆ ಬಲಶಾಲಿಯಾಗಿದ್ದು, ಟ್ರಂಪ್ ಸುಂಕದ ಹೊಡೆತದ ಪರಿಣಾಮವನ್ನು ಕುಗ್ಗಿಸಲಿದೆ. ಆದರೆ, ಜಾಗತಿಕ ಮಟ್ಟದಲ್ಲಿ ಷೇರುಪೇಟೆಗಳ ಕುಸಿತ ಮುಂದುವರಿದರೆ, ಅದರಿಂದ ಇಲ್ಲಿನ ಹೂಡಿಕೆದಾರರೂ ವಿಶ್ವಾಸ ಕಳೆದುಕೊಳ್ಳುತ್ತಾರೆ. ವ್ಯಾಪಾರ ಸಮರಕ್ಕೆ ಹೆದರಿ ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆಗೆ ಹಿಂಜರಿದರೆ ಅದರಿಂದ ಮತ್ತಷ್ಟು ನಷ್ಟ. ಜಾಗತಿಕ ಆರ್ಥಿಕ ಹಿಂಜರಿತದಂಥ ಕ್ಲಿಷ್ಟಕರ ವಾತಾವರಣದಲ್ಲೂ ಭಾರತ ತನ್ನದೇ ಮಾರ್ಗವನ್ನು ಕಂಡುಕೊಂಡು, ಈ ಸಮಸ್ಯೆಯಿಂದ ಬಹುಬೇಗ ಹೊರಬಂದಿದೆ ಎಂಬುದು ಗೊತ್ತಿರುವಂಥದ್ದೇ.
ಪ್ರಸ್ತುತ ಪಾರಸ್ಪರಿಕ ತೆರಿಗೆಯ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲಾಗುವುದು ಮತ್ತು ಅಮೆರಿಕ ವಿರುದ್ಧ ಪ್ರತೀಕಾರದ ಕ್ರಮವಾಗಿ ಹೆಚ್ಚುವರಿ ತೆರಿಗೆ ವಿಧಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಅಮೆರಿಕ ಸುಂಕ ಹಲವು ವಲಯಗಳ ಮೇಲೆ ಪರಿಣಾಮ ಬೀರುತ್ತಿದೆ. ಇದು ಆರಂಭಿಕ ಹಂತವಾಗಿರುವುದರಿಂದ, ರಾಜತಾಂತ್ರಿಕ ಮಾತುಕತೆಯ ಮೂಲಕ ವಿವಾದವನ್ನು ರ್ತಾಕ ಅಂತ್ಯಕ್ಕೆ ತರುವುದು ಮುಖ್ಯ. ಕೇಂದ್ರ ಸರ್ಕಾರ ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಂತೆಯೇ, ಈ ಸಮಸ್ಯೆಗೆ ಪರಿಹಾರದ ಮಾರ್ಗವನ್ನು ಶೀಘ್ರದಲ್ಲಿ ಕಂಡುಕೊಳ್ಳುವುದು ಜಾಣನಡೆ ಎನಿಸಬಲ್ಲದು.