

ಸಾಗರ: ಜಗತ್ತಿನಲ್ಲಿಯೇ ಶ್ರೇಷ್ಠವಾದ ಭಾರತದ ಸಂವಿಧಾನವನ್ನು ಕೆಲವರು ಒಪ್ಪದಿರುವುದು ದುರದೃಷ್ಟಕರ ಸಂಗತಿ. ಆದರೆ ಸಂವಿಧಾನ ನೀಡಿರುವ ಹಕ್ಕು ಮತ್ತು ಕರ್ತವ್ಯಗಳು ಅನುಕರಣೀಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ) ಯಿಂದ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಸಮಾನತೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಡಾ. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ ಸಂವಿಧಾನ ಭಾರತೀಯರ ಹೆಮ್ಮೆ. ಅವರ ಆಶಯಗಳನ್ನು ಅನುಷ್ಠಾನಕ್ಕೆ ತರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಸಂವಿಧಾನ ರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದರು.
ಸಂವಿಧಾನದ ಮೂಲಕ ಸೌಲಭ್ಯ ಪಡೆದ ಸಮುದಾಯಗಳ ಬದುಕು ಹಸನಾಗಬೇಕು. ಪರಿಶಿಷ್ಟ ಜಾತಿ ಮತ್ತು ವರ್ಗದ ಮಕ್ಕಳು ಉನ್ನತ ಶಿಕ್ಷಣ ಪಡೆದು, ಉತ್ತಮ ಹುದ್ದೆಗೆ ಹೋಗಬೇಕು. ಸರ್ಕಾರ ನೀಡಿದ ಸೌಲಭ್ಯಗಳು ಸದ್ಬಳಕೆಯಾಗಬೇಕು. ಸವಲತ್ತು ಪಡೆದವರೇ ಮತ್ತೆ ಮತ್ತೆ ಪಡೆಯುವುದು ಸೂಕ್ತವಲ್ಲ. ನಿಜವಾದ ಲಾನುಭವಿಗಳಿಗೆ ಅದು ತಲುಪುವಂತಾಗಬೇಕು ಎಂದು ತಿಳಿಸಿದರು
ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಬದುಕು ನಮಗೆ ಮಾರ್ಗದರ್ಶನ ನೀಡುವಂಥದ್ದು. ಅವರ ಜಯಂತಿ, ಪರಿನಿರ್ವಾಣ ದಿನ ಆಚರಿಸಿದ ಮಾತ್ರಕ್ಕೆ ಮುಗಿಯುವುದಿಲ್ಲ. ಅವರ ತತ್ವಾದರ್ಶಗಳ ಪರಿಪಾಲನೆಯಾಗಬೇಕು. ಸಂವಿಧಾನದ ಅರ್ಥವನ್ನು ಸಮುದಾಯಕ್ಕೆ ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.
ದಲಿತ ಮುಖಂಡ ನಾರಾಯಣ ಮಂಡಗಳಲೆ, ಉಪವಿಭಾಗಾಧಿಕಾರಿ ಯತೀಶ್, ಏಳುಕೋಟಿ, ಗಣಪತಿ ಮಂಡಗಳಲೆ, ಲಲಿತಮ್ಮ, ಸಂತೋಷಕುಮಾರ್, ವಕೀಲ ಸತೀಶ್, ರಾಮಣ್ಣ ಹಸಲರು, ಕಲಸೆ ಚಂದ್ರಪ್ಪ, ಪರಿಮಳಾ, ಶಿವಪ್ಪ, ನಾರಾಯಣ, ಎಲ್.ಚಂದ್ರಪ್ಪ, ನಾಗರಾಜ್ ಇತರರಿದ್ದರು.