

ಹುಬ್ಬಳ್ಳಿ: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮೀಸಲಾತಿ ಪ್ರಮಾಣ ಹೆಚ್ಚಿಸಿರುವ ಹಾಗೂ ಒಳ ಮೀಸಲಾತಿ ಕಲ್ಪಿಸಿರುವ ಬಗ್ಗೆ ಕಾಂಗ್ರೆಸ್ ಪಕ್ಷ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ ನೆಹರು ಮೈದಾನದಲ್ಲಿ ರಾಜ್ಯ ಪರಿಶಿಷ್ಟ ಜಾತಿಗಳ ಒಕ್ಕೂಟದಿಂದ ಗುರುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ನಿಲುವಿನ ಪರವಾಗಿ ಇದ್ದಾರೆಯೋ ಅಥವಾ ವಿರುದ್ಧವಾಗಿ ಇದ್ದಾರೆಯೋ ಎಂಬುದನ್ನು ಕಾಂಗ್ರೆಸ್ಸಿಗರು ಹೇಳಬೇಕು. ದಲಿತ ಬಂಧುಗಳಿಗೆ ಕಾಂಗ್ರೆಸ್ ನಿಲುವು ಗೊತ್ತಾಗಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಭೋವಿ, ಕೊರಮ, ಬಂಜಾರ. ಕೊರಚ ಸಮಾಜಕ್ಕೆ ಕಲ್ಪಿಸಿರುವ ಪರಿಶಿಷ್ಟ ಮೀಸಲಾತಿಯನ್ನು ತೆಗೆಯುತ್ತಾರೆ ಎಂದು ಕಾಂಗ್ರೆಸ್ನವರು ಅಪ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಇದೊಂದು ಐತಿಹಾಸಿಕ ಕಾರ್ಯಕ್ರಮ. ದೇಶದ ಇತಿಹಾಸ ದಲ್ಲಿ ದೊಡ್ಡ ಕೆಲಸವನ್ನು ಸಿಎಂ ಮಾಡಿದ್ದಾರೆ. ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ಈ ರೀತಿಯ ತೀರ್ಮಾನ ಯಾರೂ ಕೈಗೊಂಡಿದ್ದು ಇಲ್ಲ. ಇದನ್ನು ಮನೆ ಮನೆಗೆ ತಿಳಿಸುವ ಪ್ರಯತ್ನ ಪಕ್ಷ ಕಾರ್ಯಕರ್ತರು, ದಲಿತರು ಮಾಡಬೇಕು ಎಂದರು.
ಮಾಜಿ ಸಿಎಂ ಜಗದೀಶ ಶೆಟ್ಟರ್, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಎ. ನಾರಾಯಣ ಸ್ವಾಮಿ, ಸಚಿವ ಕೊಟಾ ಶ್ರೀನಿವಾಸ ಪೂಜಾರಿ, ಕೋಲಾರ ಸಂಸದ ಮುನಿಸ್ವಾಮಿ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ. ಎಂ. ನಿಂಬಣ್ಣವರ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಇತರರು ಇದ್ದರು.