

ದೇಶದಲ್ಲಿ ಜನಗಣತಿ ಶೀಘ್ರದಲ್ಲಿ ನಡೆಯಲಿದ್ದು, ಜನಗಣತಿ ಜೊತೆಗೆ ಜಾತಿಗಣತಿಯನ್ನೂ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಪ್ರಕಟಿಸಿದರು.
ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಜಾತಿಗಣತಿಯು ಬಹುರ್ಚಚಿತ ವಿಷಯವಾಗಿದ್ದು, ಪರ-ವಿರೋಧ ಅಭಿಪ್ರಾಯಗಳೂ ವ್ಯಕ್ತವಾಗಿದ್ದು, ಗೊಂದಲದ ವಾತಾವರಣ ನಿರ್ವಣವಾಗಿದೆ. ಕೇಂದ್ರದ ನಿರ್ಧಾರವು ಈ ಗೊಂದಲವನ್ನು ತಿಳಿಯಾಗಿಸಬಹುದೆಂದು ನಿರೀಕ್ಷಿಸಬಹುದಾಗಿದೆ. ‘ಕೆಲ ರಾಜ್ಯಗಳು ಜಾತಿ ಗಣತಿ ನಡೆಸಿವೆ. ಇನ್ನು ಕೆಲ ರಾಜ್ಯಗಳು ಜಾತಿ ಸಮೀಕ್ಷೆ ನಡೆಸಿವೆ. ಕೆಲವೆಡೆ ರಾಜಕೀಯ ಉದ್ದೇಶದಿಂದ ಅಪಾರದರ್ಶಕವಾಗಿ ಸಮೀಕ್ಷೆ ನಡೆದಿದೆ.
ಇದೆಲ್ಲದರಿಂದಾಗಿ ಸಮಾಜದಲ್ಲಿ ಸಂದೇಹಕ್ಕೆ ಆಸ್ಪದವಾಗುತ್ತದೆ. ರಾಜಕೀಯ ಕಾರಣಕ್ಕಾಗಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ಜನಗಣತಿ ಸಂದರ್ಭದಲ್ಲಿ ಜಾತಿಗಣತಿಯನ್ನೂ ನಡೆಸಲಾಗುವುದು’ ಎಂದು ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ. ಬಿಹಾರ ಮತ್ತು ತೆಲಂಗಾಣ ರಾಜ್ಯಗಳು ಈಗಾಗಲೇ ಜಾತಿ ಸಮೀಕ್ಷೆ ನಡೆಸಿವೆ ಎಂಬುದು ಉಲ್ಲೇಖನೀಯ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಾತಿಗಣತಿಯನ್ನು ಬಲವಾಗಿ ಪ್ರತಿಪಾದಿಸುತ್ತಿದ್ದು, ಚುನಾವಣಾ ಪ್ರಚಾರದಲ್ಲಿಯೂ ಉಲ್ಲೇಖಿಸಿದ್ದರು. ಕಾಂಗ್ರಸ್ನ ಸತತ ಒತ್ತಡದ ಪರಿಣಾಮವಾಗಿ ಕೇಂದ್ರ ಸರ್ಕಾರ ಜಾತಿಗಣತಿ ನಡೆಸುವ ನಿರ್ಣಯಕ್ಕೆ ಬಂದಿದೆ ಎಂದು ಪಕ್ಷದ ನಾಯಕರು ಹೇಳಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸಲಾದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ)ಯ ವರದಿ ಈಗಾಗಲೇ ಸರ್ಕಾರದ ಕೈಸೇರಿದ್ದು, ಸಚಿವ ಸಂಪುಟದಲ್ಲಿ ಮಂಡನೆಯೂ ಆಗಿದೆ. ಈ ವರದಿ ಬಗ್ಗೆ ನಿರ್ಣಯ ಕೈಗೊಳ್ಳಲು ಇನ್ನೊಮ್ಮೆ ವಿಶೇಷ ಸಂಪುಟ ಸಭೆ ಕರೆಯುವ ಸಾಧ್ಯತೆಯೂ ಇದೆ. ಆದರೆ ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ಈ ವರದಿಯ ಭವಿಷ್ಯವೇನು ಎಂಬ ಪ್ರಶ್ನೆಯೂ ಮೂಡಿದೆ. 2015ರಲ್ಲಿ ನಡೆಸಿದ ಸಮೀಕ್ಷೆ ಆಧಾರಿತ ದತ್ತಾಂಶಗಳ ಮೇಲೆ ಈ ವರದಿ ಸಿದ್ಧವಾಗಿದೆ. ಜನಸಂಖ್ಯೆ ಆಧಾರಿತವಾಗಿ ಸರ್ಕಾರಿ ಸವಲತ್ತುಗಳನ್ನು ನೀಡಲು ಜಾತಿಗಣತಿ ಅವಶ್ಯ ಎಂಬುದು ಇದರ ಪರವಾಗಿರುವವರ ವಾದ.
ಆದರೆ ಇದರಿಂದ ಜಾತಿ ಕಂದಕ ಮತ್ತಷ್ಟು ಹೆಚ್ಚುತ್ತದೆ ಎಂಬುದು ಜಾತಿಗಣತಿ ವಿರೋಧಿಸುವವರ ಅಭಿಪ್ರಾಯ. ನಿಯಮ ಪ್ರಕಾರ, ದೇಶದಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆಯಬೇಕು. ಇದರಿಂದ ದೇಶದ ಜನಸಂಖ್ಯೆಯ ಬಗ್ಗೆ ನಿಖರ ಮಾಹಿತಿ ದೊರೆಯುವುದಲ್ಲದೆ, ಸರ್ಕಾರದ ಯೋಜನೆಗಳಿಗೂ ಇದು ಮೂಲಾಧಾರವಾದ ದತ್ತಾಂಶವಾಗಿರುತ್ತದೆ. 2021ರಲ್ಲಿ ಕರೊನಾ ಕಾರಣಕ್ಕೆ ಜನಗಣತಿ ನಡೆಸಲಾಗಿರಲಿಲ್ಲ. ಇದೀಗ ಮುಹೂರ್ತ ಬಂದಹಾಗಿದೆ. ಕೇಂದ್ರ ಸರ್ಕಾರ ಜನಗಣತಿ ಬಗ್ಗೆ ಸ್ಪಷ್ಟ ಕಾರ್ಯಸೂಚಿಯನ್ನು ಈಗ ಬಿಡುಗಡೆ ಮಾಡಿಲ್ಲ; ಮುಂದಿನ ದಿನಗಳಲ್ಲಿ ಮಾಹಿತಿ ನೀಡಬಹುದು.
ಜನಗಣತಿಯೆಂಬುದು ಇಡೀ ದೇಶವನ್ನು ಒಳಗೊಳ್ಳುವ ಬಹು ದೊಡ್ಡ ಕಸರತ್ತಾಗಿದ್ದು, ಮಾಹಿತಿ ಸಂಗ್ರಹಿಸುವಾಗ ದೋಷ ಉಂಟಾಗದಂತೆ ಎಚ್ಚರ ಬೇಕಾಗುತ್ತದೆ. ಈಗ ಆಧುನಿಕ ತಂತ್ರಜ್ಞಾನದ ಬೆಂಬಲ ಇರುವುದರಿಂದಾಗಿ, ಜನಗಣತಿ ಹಾಗೂ ಜಾತಿಗಣತಿಯನ್ನು ದೋಷರಹಿತವಾಗಿ ನಡೆಸಲು ಅನುಕೂಲವಾಗಿದೆ.