ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗಲಿ

25NGD1
ನಂಜನಗೂಡಿನ ಜೆಎಸ್‌ಎಸ್ ಕಾಲೇಜಿನಲ್ಲಿ ಅಧ್ಯಾಪಕರುಗಳಿಗೆ ಆಯೋಜಿಸಿದ್ದ ವೃತ್ತಿಕೌಶಲ್ಯ ಪುನಶ್ಚೇತನ ಶಿಬಿರದಲ್ಲಿ ಡಾ.ನೀಲಗಿರಿ ಎಂ.ತಳವಾರ್ ಮಾತನಾಡಿದರು.
Published on

ನಂಜನಗೂಡು: ಅಧ್ಯಾಪಕ ವೃತ್ತಿ ಅವಲಂಭಿಸಿರುವ ಉಪನ್ಯಾಸಕರು ವೃತ್ತಿ ಪರಿಣಿತರಾಗಿ ಜ್ಞಾನದ ಸಂಗ್ರಹ ಮಾಡಿಕೊಂಡು ಸತ್ಸಂಗಪೂರ್ಣ ಅನುಭವದ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮಪಡಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿವೃತ್ತ ನಿರ್ದೇಶಕ ಡಾ.ನೀಲಗಿರಿ ಎಂ.ತಳವಾರ್ ಹೇಳಿದರು.
ಶನಿವಾರ ನಗರದ ಜೆಎಸ್‌ಎಸ್ ಕಾಲೇಜಿನಲ್ಲಿ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ಅಧ್ಯಾಪಕರಿಗೆ ವೃತ್ತಿಕೌಶಲ ವಿಷಯ ಕುರಿತಾದ ಅಭಿವಿನ್ಯಾಸ (ವೃತ್ತಿಕೌಶಲ ಪುನಃಶ್ಚೇತನ ಶಿಬಿರ) ಕಾರ್ಯಕ್ರಮದಲ್ಲಿ ಮಾತನಾಡಿದರು.
ತಮ್ಮನ್ನು ತಾವು ತಿಳಿದುಕೊಂಡು ಬೇರೆಯವರನ್ನು ತಿದ್ದುವುದರಿಂದ ಉತ್ತಮ ಸುಧಾರಣೆಯನ್ನು ನಿರೀಕ್ಷಿಸಬಹುದಾಗಿದೆ. ಇನ್ನು ನಡವಳಿಕೆ, ತಿಳಿವಳಿಕೆ ಮುಂತಾದ ಮೌಲಿಕ ಅಂಶಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಜತೆಗೆ ಯುವ ಜನರನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವುದೇ ವೃತ್ತಿ ಕೌಶಲದ ಪರಮ ಗುರಿಯಾಗಿದ್ದು, ಅಧ್ಯಾಪಕರು ಶ್ರದ್ಧೆ, ಬದ್ಧತೆ ಹಾಗೂ ಭಕ್ತಿ ಮುಂತಾದ ಗುಣಗಳನ್ನು ರೂಢಿಸಿಕೊಂಡು ಅಧ್ಯಾಪನ ಮಾಡಿದಾಗ ಮಾತ್ರ ವೃತ್ತಿ ಸಂತೃಪ್ತಿ ಅನುಭವಿಸಲು ಸಾಧ್ಯ. ಆ ಮೂಲಕ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿರುವ ಜೆಎಸ್‌ಎಸ್ ಸಂಸ್ಥೆಯ ಹಿರಿಮೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದಾಗಿದೆ ಎಂದು ಹೇಳಿದರು.
ಜೆಎಸ್‌ಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್.ಹೊನ್ನೇಗೌಡ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ನಡುವೆ ಜ್ಞಾನಾಧಾರಿತ ಸಾಮರಸ್ಯದ ಬಾಂಧವ್ಯವನ್ನು ಮುಂದುವರೆಸಲು ಕರ್ತವ್ಯನಿಷ್ಠೆ, ಸಮಯಪ್ರಜ್ಞೆ ಹಾಗೂ ಪರಿಣಾಮಕಾರಿ ಬೋಧನೆಯ ವಿಧಾನವನ್ನು ಅಳವಡಿಸಿಕೊಂಡು ಸಂಸ್ಥೆಯ ಆಶಯಕ್ಕೆ ಅನುಗುಣವಾಗಿ ಸೇವೆ ಸಲ್ಲಿಸಿದಾಗ ಮಾತ್ರ ಶಿಕ್ಷಣ ಸಂಸ್ಥೆಯಲ್ಲಿ ಸಲ್ಲಿಸಿದ ಸೇವೆಗೆ ಅರ್ಥ ಬರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಆರ್.ಮೂಗೇಶಪ್ಪ ಮಾತನಾಡಿ, ಅಧ್ಯಾಪಕ ವೃತ್ತಿ ಶ್ರೇಷ್ಠ ವೃತ್ತಿಯಾಗಿದೆ. ಅಧ್ಯಾಪಕರು ಶಿಕ್ಷಣ ಸಂಸ್ಥೆ ನೀಡಿರುವ ಸೇವಾ ಅವಕಾಶವನ್ನು ಬಳಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಸೇವೆಯ ಪ್ರಾಮುಖ್ಯತೆ ಹಾಗೂ ಸೇವಾ ಧರ್ಮದ ಅರಿವು ಎಲ್ಲರಿಗೂ ಲಭ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಶಿವಕುಮಾರ್, ಡಾ.ಬಿ.ಕೆ ಕೆಂಡಗಣ್ಣಸ್ವಾಮಿ, ಕಚೇರಿ ಅಧೀಕ್ಷಕ ಕೆ.ವಿ.ಸುಂದರರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net