ಸಂಪಾದಕೀಯ| ಅಭಿಮಾನ ರಚನಾತ್ಮಕವಾಗಿರಲಿ

Promise
Published on

ಚಿತ್ರನಟ ಯಶ್ ಜನ್ಮದಿನದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಸೂರಣಗಿಯಲ್ಲಿ ಭಾನುವಾರ ತಡರಾತ್ರಿ ಬೃಹತ್ ಕಟೌಟ್ ಅಳವಡಿಸುವ ವೇಳೆ ವಿದ್ಯುತ್ ತಂತಿ ರ್ಸ³ಸಿ ಮೂವರು ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟರೆ, ಯಶ್ ಬೆಂಗಾವಲಿಗೆ ತೆರಳಿದ್ದ ಪೊಲೀಸ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಯುವಕನೊಬ್ಬ ಸೋಮವಾರ ಮೃತಪಟ್ಟಿದ್ದಾನೆ. ಅಭಿಮಾನದ ಪರಾಕಾಷ್ಠೆಯಲ್ಲಿ ನಡೆದಿರುವ ಈ ಅಚಾತುರ್ಯದ ಘಟನೆಗಳು ನಿಜಕ್ಕೂ ದುರದೃಷ್ಟಕರ. ಬಾಳಿ ಬೆಳಗಬೇಕಿದ್ದ ಜೀವಗಳು ಬಲಿಯಾಗಿರುವುದರಿಂದ ಅವರ ಕುಟುಂಬಗಳು ಆಧಾರವೇ ಕಳೆದುಕೊಂಡಂತಾಗಿದೆ.

ನಟ ಯಶ್ ಕೂಡಲೇ ಸೂರಣಗಿಗೆ ಭೇಟಿ ನೀಡಿ, ಮೃತ ಯುವಕರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ ಮತ್ತು ಘಟನೆಯ ಬಗ್ಗೆ ತೀವ್ರ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಅಭಿಮಾನ, ಪ್ರೀತಿ ಇದೆಲ್ಲವೂ ಮನುಷ್ಯನ ಸಹಜಗುಣ. ಆದರೆ, ಇದನ್ನು ಯಾವ ರೀತಿಯಲ್ಲಿ ವ್ಯಕ್ತಪಡಿಸುತ್ತೇವೆ ಎಂಬುದು ಮುಖ್ಯ. ಅದರಲ್ಲೂ, ಸಮಾಜದಲ್ಲಿ ಸೆಲೆಬ್ರಿಟಿಗಳ ಬಗ್ಗೆ ಅದೇನೋ ಆಕರ್ಷಣೆ, ಕುತೂಹಲ. ನಟರ ಸಿನಿಮಾ ಬಿಡುಗಡೆ ಸಂದರ್ಭದಲ್ಲೂ ಇಂಥ ಅತಿರೇಕಗಳನ್ನು ಗಮನಿಸಿದ್ದೇವೆ. ನಟರ ಕಟೌಟ್​ಗಳ ಮೇಲೆ ಹತ್ತಿ ಹಾಲಿನ ಅಭಿಷೇಕ ಮಾಡುವುದು, ರಕ್ತದಲ್ಲಿ ಪತ್ರ ಬರೆಯುವುದು, ಅವರನ್ನು ನೋಡಲು ಪಾದಯಾತ್ರೆಯಲ್ಲಿ ಬರುವುದು ಹೀಗೆ ಹಲವು ನಿದರ್ಶನಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಆಯಾ ಗಣ್ಯರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಲು ಇದು ಸರಿದಾರಿಯಲ್ಲ. ಅಲ್ಲದೆ, ಭಾವೋದ್ವೇಗಕ್ಕೆ ಒಳಗಾಗಿ ನಡೆಸುವ ಕಾರ್ಯಗಳು ಅಚಾತುರ್ಯಗಳಿಗೆ ಕಾರಣವಾಗಬಹುದು.

ಹುಟ್ಟುಹಬ್ಬವೇ ಇರಲಿ, ಸಿನಿಮಾ ಬಿಡುಗಡೆಯ ಸಂದರ್ಭವೇ ಇರಲಿ- ಆ ದಿನವನ್ನು ರಚನಾತ್ಮಕ ಚಟುವಟಿಕೆಗಳ ಮುಖಾಂತರ ಸ್ಮರಣೀಯವಾಗಿಸಲು ಸಾಧ್ಯವಿದೆ. ಸಮಾಜದಲ್ಲಿ ದುಃಖಿತರ, ಶೋಷಿತರ, ಬಡವರ ಸಂಖ್ಯೆ ದೊಡ್ಡಪ್ರಮಾಣದಲ್ಲಿದೆ. ಒಂದಿಷ್ಟು ಸಮಾಜಮುಖಿ ಕೆಲಸಗಳ ಮೂಲಕ ಅಂಥವರ ಮೊಗದಲ್ಲಿ ನಗು ಅರಳಿಸಿದರೆ, ಸಿಗುವ ಸಾರ್ಥಕತೆ ಅನನ್ಯ. ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಅನ್ನದಾನ, ಬಡವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು. ರಸ್ತೆಬದಿಯಲ್ಲಿ ವಾಸಿಸುವ ನಿರಾಶ್ರಿತರಿಗೆ ಜೀವನಾವಶ್ಯಕ ವಸ್ತುಗಳ ವಿತರಣೆ, ಬಡ ರೋಗಿಗಳಿಗೆ ಆರ್ಥಿಕ ನೆರವು, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರ ಹೀಗೆ ಎಷ್ಟೊಂದು ಮಾರ್ಗಗಳ ಮೂಲಕ ಅಭಿಮಾನದ ಸಂಭ್ರಮವನ್ನು ಆಚರಿಸಬಹುದಲ್ಲವೇ? ಈ ನಿಟ್ಟಿನಲ್ಲಿ ಅಭಿಮಾನಿಗಳ ಸಂಘಗಳು ಯೋಚಿಸುವುದಿಲ್ಲವೇಕೆ? ಕೆಲವರು ಈಗಾಗಲೇ ಇಂಥ ಮಾದರಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಆದರೆ, ಪ್ರಮಾಣ ಇನ್ನಷ್ಟು ಹೆಚ್ಚಬೇಕಿದೆ. ಒಳ್ಳೆಯ ಕೆಲಸಗಳ ಮೂಲಕ ಅಭಿಮಾನವನ್ನು ವ್ಯಕ್ತಪಡಿಸಿದರೆ ನಟರಿಗೆ ಅಥವಾ ಸಂಬಂಧಿತ ಗಣ್ಯರಿಗೂ ಅವರ ಅನುಯಾಯಿಗಳ ಬಗ್ಗೆ ಸಂತೋಷವಾಗುತ್ತದೆ. ಇಲ್ಲಿ ಯೋಚನೆಯ ದಿಕ್ಕು ಬದಲಿಸಿ, ಸಕಾರಾತ್ಮಕ ಹಾದಿಯಲ್ಲಿ ಸಾಗಬೇಕಿರುವುದು ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net