

ಬೆಂಗಳೂರು: ಕೇಂದ್ರ ಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಶೋಭಾ ಕರಂದ್ಲಾಜೆ ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ. ನನಗೂ ಅವರ ವಿರುದ್ಧ ಬೇಕಾದ ಹಾಗೆ ಆರೋಪ ಮಾಡಲು ಬರುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿರುಗೇಟು ನೀಡಿದರು.
ಸಿಎಂ ಅಧಿಕೃತ ನಿವಾಸ ‘ಕಾವೇರಿ’ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಮುಡಾ ಕಚೇರಿಯಿಂದ ಕಡತಗಳನ್ನು ಎತ್ತೊಯ್ದ ಬೈರತಿ ಸುರೇಶ್ ಸುಟ್ಟು ಹಾಕಿದ್ದು, ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತ್ಯುತ್ತರಿಸಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಹಳ ಒಳ್ಳೆಯವರು. ಆದರೆ ಅವರ ಪತ್ನಿ ಮೈತ್ರಾದೇವಿ ಸಾವು ಹೇಗಾಯಿತು ?. ಶೋಭಾ ಕರಂದ್ಲಾಜೆಯವರ ಪಾತ್ರವಿದ್ದು, ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರೆ ಶೋಭಾ ಕರಂದ್ಲಾಜೆ ಒಪ್ಪುತ್ತಾರಾ ? ಎಂದು ಕೇಳಿದರು.
ಇ.ಡಿ.ಯವರು ನೋಟಿಸ್ ನೀಡಿ ಸಮಜಾಯಿಷಿ ಕೇಳಿದರೆ ದಾಖಲೆಗಳ ಸಹಿತ ಉತ್ತರ ನೀಡಲು ಸಿದ್ಧನಿರುವೆ. ಆದರೆ ತನಿಖಾ ಸಂಸ್ಥೆಯವರು ಶೋಭಾ ಕರಂದ್ಲಾಜೆ ಹೇಳಿದಂತೆ ಕೇಳುತ್ತಾರೆಯೇ ? ಎಂದು ಬೈರತಿ ಸುರೇಶ್ ಪ್ರಶ್ನಿಸಿದರು.
ಶೋಭಾ ಕರಂದ್ಲಾಜೆಯವರಿಗೆ ನನ್ನ ಕ್ಷೇತ್ರದಲ್ಲಿ ಲೀಡ್ ಬರಲಿಲ್ಲವೆಂದು ಹೊಟ್ಟೆಯುರಿ. ಅದಕ್ಕಾಗಿ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ಅವರೂ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರುವುದಾದರೆ ನಾನು ಈಗಲೇ ಬರಲು ತಯಾರು ಎಂದರು.
ಮೈಸೂರಿನಲ್ಲಿ ಒಬ್ಬರು ಶಾಸಕರಿದ್ದಾರೆ, ಮಾತೆತ್ತಿದರೆ ಸುಳ್ಳು ಹೇಳುತ್ತಾರೆ. ಮನೆಯೊಳಗೆ ಪೂಜೆ ಮಾಡಿ, ಹಣೆಗೆ ನಾಮಯಿಟ್ಟುಕೊಂಡು ಹೊರಗೆ ಬಂದ ಬಳಿಕ ಸುಳ್ಳು ಹೇಳಿದರೆ ಒಳ್ಳೆಯವರಾಗಲ್ಲ, ದೇವರು ಕೂಡ ಮೆಚ್ಚುವುದಿಲ್ಲ ಎಂದು ಶಾಸಕ ಶ್ರೀವತ್ಸ ಹೆಸರೆತ್ತದೆ ವಾಗ್ದಾಳಿ ಮಾಡಿದರು.
ಮುಡಾ ಕಚೇರಿಯಿಂದ ಒಂದೇ ಕಡತ ನಾಪತ್ತೆಯಾಗಿದ್ದರೆ ಚಾಮುಂಡೇಶ್ವರಿ ಸನ್ನಿಧಿಗೆ ನಾನು ಬಂದು ಪ್ರಮಾಣ ಮಾಡುತ್ತೇನೆ. ಅವರು ಬೇಕಿದ್ದರೆ ಚಾಮುಂಡೇಶ್ವರಿ ಅಥವಾ ಮಂಜುನಾಥೇಶ್ವರ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಮತ್ತೊಮ್ಮೆ ಸವಾಲು ಹಾಕಿದರು.
ಮುಡಾ ಕಡತಗಳು, ದಾಖಲೆಗಳಿಗೆ ಸಂಬಂಧಿಸಿದಂತೆ ನಾನು ಆಣೆ ಪ್ರಮಾಣದ ಸವಾಲು ಹಾಕಿ ಎರಡು ದಿನಗಳು ಕಳೆದರೂ ಶ್ರೀವತ್ಸ ಸೇರಿ ಯಾರೊಬ್ಬರೂ ಉತ್ತರಿಸಿಲ್ಲವೆಂದು ಬೈರತಿ ಸುರೇಶ್ ಕೆಣಕಿದರು.