

ಶಿವಮೊಗ್ಗ: ಶಂಕರ ಕಣ್ಣಿನ ಆಸ್ಪತ್ರೆಯ ಸೇವೆ ಅನನ್ಯವಾಗಿದ್ದು, ಈಗ ನಗರದ ಹೃದಯ ಭಾಗದಲ್ಲಿ ಹೊರರೋಗಿಗಳ ವಿಭಾಗ ಆರಂಭಿಸಿರುವುದರಿಂದ ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ ಎಂದು ಜಿಪಂ ಸಿಇಒ ಎನ್.ಹೇಮಂತ್ ಹೇಳಿದರು.
ದುರ್ಗಿಗುಡಿಯಲ್ಲಿ ಶಂಕರ ಕಣ್ಣಿನ ಆಸ್ಪತ್ರೆ ಹೊರರೋಗಿಗಳ ಕೇಂದ್ರ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ಸಮಗ್ರ ಸೇವೆ ಶಿವಮೊಗ್ಗದಲ್ಲಿರುವುದು ಹೆಮ್ಮೆಯ ಸಂಗತಿ. ಶಂಕರ ನೇತ್ರ ಕೇಂದ್ರದ ಮೂಲಕ ಇನ್ನೂ ಹೆಚ್ಚಿನ ಜನರಿಗೆ ನೇತ್ರ ಚಿಕಿತ್ಸಾ ಸೇವೆ ಸಿಗಲಿ ಎಂದು ಆಶಿಸಿದರು.
ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ಸಂಸ್ಥೆಯ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ಡಿಎಚ್‌ಒ ಡಾ. ಕೆ.ಎಸ್.ನಟರಾಜ್ ಮಾತನಾಡಿ, ಸಂಸ್ಥೆ ಸಲ್ಲಿಸುತ್ತಿರುವ ಸೇವೆಯು ನಿತ್ಯನೂತನವಾದುದು. ಜಿಲ್ಲಾ ಅಂಧತ್ವ ಮುಕ್ತ ಅಭಿಯಾನಕ್ಕೆ ಸಂಸ್ಥೆ ಕೈಜೋಡಿಸಿರುವುದು ಸಂತಸದ ಸಂಗತಿ ಎಂದರು.
ಶಂಕರ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಎಸ್.ಮಹೇಶ್ ಮಾತನಾಡಿ, ಸಂಸ್ಥೆಯು ನೂತನ ಶಂಕರ ನೇತ್ರ ಕೇಂದ್ರವನ್ನು ಜನರ ಅನುಕೂಲಕ್ಕಾಗಿ ಶಿವಮೊಗ್ಗದ ಹೃದಯಭಾಗ ದುರ್ಗಿಗುಡಿಯಲ್ಲಿ ಆರಂಭಿಸಿದೆ. ಶಂಕರ ಕಣ್ಣಿನ ಆಸ್ಪತ್ರೆಯು ಮಲೆನಾಡಿನ ಜನತೆಗೆ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ 16 ವರ್ಷಗಳಿಂದ ನಿರಂತರ ನೇತ್ರಚಿಕಿತ್ಸಾ ಸೇವೆ ಒದಗಿಸುತ್ತಿದೆ. ನಗರದ ಕೇಂದ್ರ ಭಾಗದಲ್ಲಿ ಹೊರರೋಗಿ ವಿಭಾಗ ಆರಂಭಿಸಿ, ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ ಪೂರ್ಣ ಪ್ರಮಾಣದ ಸೇವೆ ನೀಡಲು ಮುಂದಾಗಿದೆ ಎಂದು ತಿಳಿಸಿದರು.
ಆಸ್ಪತ್ರೆಯ ಕಾರ್ನಿಯಾ ತಜ್ಞ ಡಾ. ಎಂ.ಎಚ್.ಮಲ್ಲಿಕಾರ್ಜುನ್ ಸಿಟಿ ಸೆಂಟರ್‌ನ ಧ್ಯೇಯ ಮತ್ತು ಕಾರ್ಯಕ್ರಮಗಳ ವಿವರಣೆ ನೀಡಿದರು. ಶಂಕರ ಆಸ್ಪತ್ರೆಯ ಪೋಷಕರಾದ ಡಾ. ನರೇಂದ್ರ ಭಟ್, ಡಾ. ವೃಂದಾ ಭಟ್, ಡಾ. ಮಂಜುನಾಥ, ಡಾ. ವೆಂಕಟೇಶ್ ಮೂರ್ತಿ, ಮುಖ್ಯ ಆಡಳಿತಾಧಿಕಾರಿ ಗಾಯತ್ರಿ ಶಾಂತಾರಾಮ್, ಅನಿತಾ ಮುಂತಾದವರಿದ್ದರು.