

ದಿನದಿಂದ ದಿನಕ್ಕೆ ಕರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಅದರಲ್ಲೂ, ಬೆಂಗಳೂರಿನಲ್ಲಿ ಸೋಂಕಿತರ ಮತ್ತು ಮರಣದ ಪ್ರಮಾಣ ಏರಿಕೆ ಆಗುತ್ತಿದೆ. ಸೋಂಕು ಸಮುದಾಯಕ್ಕೆ ಹರಡಿರುವ ಸಾಧ್ಯತೆಯನ್ನು ತಜ್ಞವೈದ್ಯರು ಅಲ್ಲಗಳೆದಿಲ್ಲ. ಕಳೆದ ಮೂರು ತಿಂಗಳುಗಳಿಂದ ಕರ್ನಾಟಕದಲ್ಲಿ ಕರೊನಾ ನಿಯಂತ್ರಣದಲ್ಲಿತ್ತು. ಸಾಮಾಜಿಕ ದಿಗ್ಬಂಧನ ಮತ್ತು ಸರ್ಕಾರ ತೆಗೆದುಕೊಂಡ ಇತರ ಕ್ರಮಗಳು ಅದಕ್ಕೆ ಕಾರಣವಾಗಿದ್ದವು. ಹಾಗಾಗಿಯೇ, ಕೇಂದ್ರ ಸರ್ಕಾರ ಕೂಡ ಕರ್ನಾಟಕ ಮಾದರಿಯನ್ನು ಶ್ಲಾಘಿಸಿತ್ತು. ಆದರೆ, ಕಳೆದೊಂದು ವಾರದ ಬೆಳವಣಿಗೆಗಳನ್ನು ಗಮನಿಸಿದರೆ ಮುಂಬರುವ ದಿನಗಳಲ್ಲಿ ಸೋಂಕು ಪ್ರಕರಣಗಳು ಮತ್ತಷ್ಟು ತೀವ್ರವಾಗಿ ಏರಿಕೆ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಆರ್ಥಿಕ ಚಟುವಟಿಕೆಗಳು ಈಗಷ್ಟೇ ಪುನರಾರಂಭಗೊಂಡು, ಚೇತರಿಕೆಯ ಹಂತದಲ್ಲಿ ಇರುವಾಗ ಮತ್ತೊಮ್ಮೆ ಲಾಕ್ಡೌನ್ ವಿಧಿಸುವುದು ತುಂಬ ಕಷ್ಟ. ಇದು ಸರ್ಕಾರಕ್ಕೂ, ಜನಸಾಮಾನ್ಯರ ಪಾಲಿಗೂ ಸಂದಿಗ್ಧ ಪರಿಸ್ಥಿತಿ. ಹೆಚ್ಚುತ್ತಿರುವ ಕರೊನಾ ಪ್ರಕರಣಗಳನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿರುವಾಗ ಕೆಲವೆಡೆ ಜನಪ್ರತಿನಿಧಿಗಳು ಮತ್ತು ಜನರ ಪ್ರಯತ್ನದ ಫಲವಾಗಿ ಸ್ವಯಂಸ್ಪೂರ್ತಿಯಿಂದ ದಿಗ್ಬಂಧನ ಘೋಷಿಸಲಾಗುತ್ತಿರುವುದು ಗಮ ನಾರ್ಹ. ಬೆಂಗಳೂರಿನಲ್ಲಿ ಪರಿಸ್ಥಿತಿ ಗಂಭೀರ ಆಗುತ್ತಿರುವುದನ್ನು ಮನ ಗಂಡು ಚಿಕ್ಕಪೇಟೆ ಬಟ್ಟೆ ವ್ಯಾಪಾರಿಗಳ ಸಂಘ ಸೇರಿ ವಿವಿಧ ಸಂಘಟನೆಗಳು ಮಾರುಕಟ್ಟೆಯನ್ನು ಜೂನ್ 29ರವರೆಗೆ ಸ್ವಯಂಪ್ರೇರಿತವಾಗಿ ಬಂದ್ ಮಾಡಲು ನಿರ್ಧರಿಸಿವೆ. ಕನಕಪುರದಲ್ಲಿ ಅಲ್ಲಿಯ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ವ್ಯಾಪಾರಿಗಳು ಜುಲೈ 1ರವರೆಗೆ ಲಾಕ್ಡೌನ್ ಮಾಡಲು ಸಹಮತ ವ್ಯಕ್ತಪಡಿಸಿದ್ದಾರೆ. ಇಂಥ ಪ್ರಯತ್ನಗಳು ಹೆಚ್ಚಬೇಕಿದೆ. ಸೋಂಕಿನ ಹರಡುವಿಕೆ ತೀವ್ರಗೊಳ್ಳುತ್ತಿರುವುದರಿಂದ ಬರೀ ಸರ್ಕಾರದ ಮೇಲೆ ಭಾರ ಹಾಕಿ ಕೂರುವಂತಿಲ್ಲ. ಆಯಾ ಜನಪ್ರತಿನಿಧಿಗಳು ಕಾಳಜಿ ವಹಿಸಿ, ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಿದೆ. ಶಾಸಕರಿಗೆ ಮತ್ತು ಇತರ ಜನಪ್ರತಿನಿಧಿಗಳಿಗೆ ಕ್ಷೇತ್ರದ ಭೌಗೋಳಿಕ ಪರಿಚಯ ಮತ್ತು ಹಾಲಿ ಸ್ಥಿತಿಯ ಅರಿವು ಇರುತ್ತದೆ. ಹೀಗಿರುವಾಗ ಕರೊನಾ ನಿಯಂತ್ರಣಕ್ಕೆ ಕ್ಷೇತ್ರವ್ಯಾಪ್ತಿಯಲ್ಲಿ ಏನೆಲ್ಲ ಮಾಡಬಹುದು ಎಂಬುದರ ಬಗ್ಗೆ ವ್ಯಾಪಾರಿಗಳ ಜತೆ, ಸ್ಥಳೀಯ ಮುಖಂಡರು, ಗಣ್ಯರ ಜತೆ ರ್ಚಚಿಸಿ ಒಮ್ಮತದ ತೀರ್ವನಕ್ಕೆ ಬಂದು ಬಿಗಿಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಜನರ ಮೇಲಿನ ಜವಾಬ್ದಾರಿಯೂ ಹೆಚ್ಚಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿಯದೆ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಹಾಕದೆ ಸಂಚರಿಸುವುದು, ವೈಯಕ್ತಿಕ ಅಂತರವನ್ನು ಕಾಯ್ದುಕೊಳ್ಳದೆ ನಿರ್ಲಕ್ಷ್ಯ ವಹಿಸುವುದು ಸೇರಿ ಒಂದು ಸಣ್ಣ ತಪು್ಪ ಕೂಡ ದೊಡ್ಡ ಹಾನಿಯನ್ನು ಸೃಷ್ಟಿಸಬಲ್ಲದು. ಆದ್ದರಿಂದ, ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ, ಸ್ವಚ್ಛತೆ ಕಾಯ್ದುಕೊಳ್ಳುವ ಹೊಣೆಗಾರಿಕೆಯನ್ನು ಮರೆಯುವಂತಿಲ್ಲ. ಮುಖ್ಯವಾಗಿ, ಸದ್ಯದ ಪರಿಸ್ಥಿತಿಯಿಂದ ಭಯಭೀತರಾಗದೆ ಎಚ್ಚರಿಕೆಯಿಂದ ಸೋಂಕಿನ ವಿರುದ್ಧ ಹೋರಾಡಬೇಕಿದೆ.