

ಎಚ್.ಡಿ.ಕೋಟೆ: ರೈತರಿಗೆ ಕೃಷಿ ಚಟುವಟಿಕೆಗೆ ನೀರಿನ ಸೌಲಭ್ಯ ಮತ್ತು ಉತ್ತಮ ಮಾರುಕಟ್ಟೆಯನ್ನು ಸರ್ಕಾರ ಕಲ್ಪಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ತಾಲೂಕಿನ ಹನುಗನಹಳ್ಳಿ ಗ್ರಾಮದಲ್ಲಿ ಗುರುವಾರ ಒಕ್ಕಲಿಗರ ಸಮುದಾಯ ಭವನದ ಭೂಮಿ ಪೂಜೆ ಮತ್ತು ಸೋಮನಾಯಕಿ ಅಮ್ಮನವರ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದರು.
ರೈತರು ಸಾಲಗಾರರಾಗದೆ ಉತ್ತಮ ಬೆಳೆ ಬೆಳೆಯುವಂತೆ ಮಾಡುವುದು ನನ್ನ ಕನಸು. ನಾನು ಸಿಎಂ ಆಗಿದ್ದಾಗ ಹನಿನೀರಾವರಿಗೆ ಸುಮಾರು 350 ಕೋಟಿ ರೂ. ಮೀಸಲಿಟ್ಟಿದ್ದೆ. ಆದರೆ ಈಗಿನ ಸರ್ಕಾರ ಆ ಹಣ ಬಿಡುಗಡೆ ಮಾಡಲಿಲ್ಲ ಎಂದು ಆರೋಪಿಸಿದರು.
ಶಾಸಕರಾದ ಸಾ.ರಾ.ಮಹೇಶ್, ಅಶ್ವಿನ್‌ಕುಮಾರ್, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಪ್ರಕಾಶ್, ಮೈಸೂರು ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ನರಸಿಂಹಸ್ವಾಮಿ, ರಾಜ್ಯ ಸಮಿತಿ ಸದಸ್ಯ ಎಸ್.ಸತೀಶ್, ತಾಲೂಕು ಅಧ್ಯಕ್ಷ ರಾಜೇಂದ್ರ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್, ಸದಸ್ಯ ಬೀರೀಹುಂಡಿ ಬಸವಣ್ಣ ಇತರರು ಇದ್ದರು.