

ಶಿವಮೊಗ್ಗ: ಬದುಕು ಪ್ರದರ್ಶನವಾಗುವ ಬದಲು ಸಮಾಜಕ್ಕೆ ನಿದರ್ಶನವಾಗಬೇಕು. ಮಾನವೀಯ ಅಂತಃಕರಣದ ಬದುಕು ನಮ್ಮದಾಗಬೇಕು. ನಾವಿಂದು ಕುಲಕ್ಕಾಗಿ ಬದುಕುತ್ತಿದ್ದೇವೆ. ಇದರ ಹೊರತಾಗಿ ಜನಾನುರಾಗಿ ಬದುಕು ನಮ್ಮದಾಗಬೇಕೆಂದು ಅಧ್ಯಾತ್ಮ ಚಿಂತಕ ಮೈಸೂರಿನ ಶಂಕರ ದೇವನೂರು ತಿಳಿಸಿದರು.
ಬೆಕ್ಕಿನಕಲ್ಮಠದಿಂದ ಆಯೋಜಿಸಿದ್ದ ಶ್ರಾವಣ ಚಿಂತನೆ ಉಪನ್ಯಾಸ ಮಾಲಿಕೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ವಚನಗಳಲ್ಲಿ ಮಾನವೀಯ ಮೌಲ್ಯಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ಶರಣರು ನೀಡಿದ ಮೌಲ್ಯಗಳನ್ನು ನಾವು ಎಷ್ಟರ ಮಟ್ಟಿಗೆ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ಎಂಬುದರ ಅವಲೋಕನ ಮಾಡಲು ಇದು ಸಕಾಲ ಎಂದು ಹೇಳಿದರು.
ಬಸವಾದಿ ಶರಣರು ಕೇವಲ ವೀರಶೈವ ಲಿಂಗಾಯತ ಸಮುದಾಯಕ್ಕೆ ಮಾತ್ರ ಮೌಲ್ಯಗಳನ್ನು ಬೋಧಿಸಲಿಲ್ಲ. ಅವರು ನೀಡಿದ ಮೌಲ್ಯಗಳು ಒಂದು ಧರ್ಮಕ್ಕೆ ಮಾತ್ರ ಸೀಮಿತವಲ್ಲ. ಅವರ ಚಿಂತನೆಗಳು ಸಮಾಜದ ಎಲ್ಲ ಜೀವಿಗಳಿಗೂ ಅತ್ಯಂತ ಉಪಯುಕ್ತವಾದವು ಎಂದು ಅಭಿಪ್ರಾಯಪಟ್ಟರು.
ಭಾರತದ ಧಾರ್ಮಿಕ ಪರಂಪರೆಯಲ್ಲಿ 12ನೇ ಶತಮಾನದ ಶರಣರ ಚಿಂತನೆಗಳು ಅತ್ಯಂತ ಮೌಲಿಕವಾದುದು. ಅಂತರಂಗದ ಶಕ್ತಿಯನ್ನು ಜಾಗೃತಗೊಳಿಸುವಂತಾದ್ದು. ಜಡ್ಡು ಕಟ್ಟಿದ ಸಮಾಜವನ್ನು ಬಡಿದೆಬ್ಬಿಸಿದವರು ಶರಣರು. ಕಾಯವನ್ನೇ ಕಾಯಕವನ್ನಾಗಿ ಮಾಡಿಕೊಳ್ಳಬೇಕೆಂದು ದುಡಿಮೆಗೆ ಪ್ರೇರೇಪಿಸಿದವರು ಶರಣರು ಎಂದು ಹೇಳಿದರು.
ಬೆಕ್ಕಿನಕಲ್ಮಠವು ಶರಣರ ಚಿಂತನೆಗಳನ್ನು ಜನರಿಗೆ ತಲುಪಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಇದರ ಅಂಗವಾಗಿ ಪ್ರತಿ ವರ್ಷ ಶ್ರಾವಣ ಚಿಂತನೆಯ ಮೂಲಕ ಪ್ರತಿ ಮನೆಗಳಿಗೂ ಶರಣರ ಸಂದೇಶಗಳನ್ನು ತಲುಪಿಸುವುದು ಸಕಾಲಿಕವಾಗಿದೆ. ಶ್ರಾವಣ ಚಿಂತನೆ ಎಂಬುದು ಅಪರೂಪದ ಪರಿಕಲ್ಪನೆಯಾಗಿದೆ ಎಂದರು.
ಬೆಕ್ಕಿನಕಲ್ಮಠದ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿದ್ಯುತ್ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಜಿ.ಶಶಿಧರ ಶ್ರಾವಣ ಚಿಂತನೆ ಉಪನ್ಯಾಸ ಮಾಲಿಕೆ ಉದ್ಘಾಟಿಸಿದರು. ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ್, ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಪ್ರಮುಖರಾದ ಶಾಂತಾ ಆನಂದ್ ಇತರರಿದ್ದರು.