

ಶಿವಮೊಗ್ಗ:ಕುವೆಂಪು ವಿವಿ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿಗಳು ಅನೇಕ ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಶುಕ್ರವಾರ ಕಾಲೇಜು ಎದುರು ಪ್ರತಿಭಟನೆ ನಡೆಸಿ ಪ್ರಾಚಾರ್ಯರಿಗೆ ಮನವಿ ಸಲ್ಲಿಸಿದರು.
ಕೆಲ ಸೆಮಿಸ್ಟರ್‌ಗಳಲ್ಲಿ ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಶುಲ್ಕ ಪಾವತಿಸಿದ್ದರೂ ಇನ್ನೂ ಫಲಿತಾಂಶ ಬಂದಿಲ್ಲ. ಉನ್ನತ ವಿದ್ಯಾಭ್ಯಾಸ ಮಾಡಲು ಬೇರೆ ವಿವಿಗಳಿಗೆ ಅರ್ಜಿ ಸಲ್ಲಿಸಿದರೆ ನೈಜ ಅಂಕಪಟ್ಟಿ ಕೇಳುತ್ತಿದ್ದಾರೆ. ಆದರೆ ಕುವೆಂಪು ವಿವಿಯಿಂದ ಇನ್ನೂ ನೈಜ ಅಂಕಪಟ್ಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಳೆಯ ಶಿಕ್ಷಣ ವ್ಯವಸ್ಥೆಯ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ಹಾಗೂ ಶುಲ್ಕ ಪಾವತಿಸಲು ವಿವಿಯಿಂದ ಅವಕಾಶ ನೀಡಿಲ್ಲ. ಹೀಗಾಗಿ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಹಾಗೂ ಉದ್ಯೋಗ ಪಡೆಯಲು ತೊಂದರೆಯಾಗುತ್ತಿದೆ. ಸಾಕಷ್ಟು ಬಾರಿ ವಿದ್ಯಾರ್ಥಿಗಳು ಕಾಲೇಜು ಹಾಗೂ ವಿವಿಯ ಕುಲಸಚಿವರಿಗೆ ದೂರು ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯುಸಿಎಂಎಸ್ ಸಾಫ್ಟ್‌ವೇರ್‌ನ ಕೆಲವು ದೋಷಗಳಿಂದ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸುವುದು ಸಾಧ್ಯವಾಗುತ್ತಿಲ್ಲ. ಪರೀಕ್ಷಾಂಗ ಶುಲ್ಕಗಳು ದುಬಾರಿಯಾಗಿದೆ. ಫಲಿತಾಂಶ ಗಮನಿಸಲು ಯುಯುಸಿಎಂಎಸ್ ಪೋರ್ಟಲ್‌ನಲ್ಲಿ ಸಮಸ್ಯೆಯಾಗುತ್ತಿದೆ. ರಾಜ್ಯದ ಎಲ್ಲ ವಿವಿಗಳಂತೆ ಏಕರೂಪ ವೇಳಾಪಟ್ಟಿ ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ತರಗತಿ ಹಾಗೂ ಪರೀಕ್ಷೆಗಳನ್ನು ಮುಗಿಸಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ಪದಾಧಿಕಾರಿಗಳಾದ ಬಿ.ಅಭಿಷೇಕ್, ಲೋಹಿತ್, ರಂಜನಿ, ಮನೋಜ್, ಅಕ್ಷಯ್, ಕಿಶನ್, ಸಚಿನ್, ಕಾರ್ತಿಕ್, ಯಶವಂತ್, ಉಷಾ, ವರುಣ್ ಪ್ರತಿಭಟನೆಯಲ್ಲಿದ್ದರು.