

ಬೆಂಗಳೂರು: ರಾಜ್ಯದಲ್ಲಿ ಭೂಸ್ವಾಧೀನದ ಎಲ್ಲ ಪ್ರಕರಣಗಳಲ್ಲಿ ನಿಗದಿತ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ, ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಒತ್ತಾಯಿಸಿದ್ದಾರೆ.
ಮೈಸೂರಿನ ಹೊರವಲಯದ ಕೆಸರೆ ಗ್ರಾಮದಲ್ಲಿ 3.16 ಎಕರೆ ಜಮೀನಿನ ಬೆಲೆ 62 ಕೋಟಿ ರೂ.ಗಳೆಂದು ನಿಮ್ಮ (ಸಿಎಂ) ಹೇಳಿಕೆಯಿಂದಲೇ ನನಗೆ ತಿಳಿದು ಬಂದಿದೆ ಎಂದು ಸಿದ್ದರಾಮಯ್ಯಗೆ ಬರೆದ ಬಹಿರಂಗಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಹೆಬ್ಬಾಳ ಮತ್ತು ಹೆಬ್ಬಾಳ ಅಮಾನಿಕೆರೆ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡ ಪ್ರತಿ ಎಕರೆ ಭೂಮಿಗೆ 12.10 ಕೋಟಿ ರೂ. ನಿಗದಿಪಡಿಸಿದೆ. ಇದು ಮಾರುಕಟ್ಟೆ ದರಕ್ಕಿಂತ ತುಂಬಾ ಕಡಿಮೆಯಾಗಿದೆ ಎಂದು ಭಾವಿಸುವೆ.
ಬಿಡಿಎ, ನೀರಾವರಿ, ಮೆಟ್ರೋ, ಹೆದ್ದಾರಿ ಹೀಗೆ ಎಲ್ಲ ರೀತಿಯ ಭೂಸ್ವಾಧೀನ ಪ್ರಕರಣಗಳಲ್ಲಿ ಪರಿಹಾರವನ್ನು ಸರ್ಕಾರ ನಿಗದಿಪಡಿಸುವಾಗ ಕೆಸರೆ ಗ್ರಾಮದ ಮಾನದಂಡ ದರವಾಗಿ ಇರಿಸಿಕೊಳ್ಳಬೇಕು.
ಮುಖ್ಯಮಂತ್ರಿಗೆ ಅನ್ವಯಿಸುವ ದರ ಶ್ರೀಸಾಮಾನ್ಯನಿಗೂ ಅನ್ವಯಿಸಬೇಕಲ್ಲವೆ ?. ಇದಕ್ಕೆ ಸಾಮಾಜಿಕ ನ್ಯಾಯವೆನ್ನುತ್ತಾರೆ. ಸಚಿವ ಸಂಪುಟದ ಎಲ್ಲ ಸದಸ್ಯರಿಗೂ ಈ ಕುರಿತು ಸೂಚನೆ ನೀಡಬೇಕು ಎಂದು ಎಸ್.ಸುರೇಶ್ ಕುಮಾರ್ ವ್ಯಂಗ್ಯವಾಗಿ ಮನವಿ ಮಾಡಿದ್ದಾರೆ.