ಪತ್ರಕರ್ತರು ನೆಲದ ಸಂಕಟಕ್ಕೆ ಧ್ವನಿಯಾಗಲಿ

klr kamarupi
ಕೋಲಾರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಪತ್ರಕರ್ತ ಹಾಗೂ ಸಾಹಿತಿ ಎಂ.ಎಸ್​.ಪ್ರಭಾಕರ (ಕಾಮರೂಪಿ) ಅವರ 2ನೇ ಪುಣ್ಯ ಸ್ಮರಣೆಯಲ್ಲಿ ಪ್ರಭಾಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಹಿರಿಯ ಪತ್ರಕರ್ತ ಕೆ.ನರಸಿಂಹಮೂರ್ತಿ, ಕೆ.ಎಸ್​.ಗಣೇಶ್​, ವಿ.ಮುನಿರಾಜು, ಸಿ.ಎಂ.ಮುನಿಯಪ್ಪ ಇದ್ದರು.
Published on

ಕೋಲಾರ: ಭಾಷೆ ತುಡಿತ ಹಾಗೂ ಭಾಷೆಯ ಸಮರ್ಥ ಬಳಕೆ ಇಂದಿನ ಪತ್ರಿಕೋದ್ಯಮದಲ್ಲಿ ಇಲ್ಲವಾಗಿದೆ ಎಂದು ಮೈಸೂರಿನ ಹಿರಿಯ ಪತ್ರಕರ್ತ ಕೆ.ನರಸಿಂಹಮೂರ್ತಿ ಬೇಸರಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ಆಯೋಜಿಸಿದ್ದ ಪತ್ರಕರ್ತ ಹಾಗೂ ಸಾಹಿತಿ ಎಂ.ಎಸ್​.ಪ್ರಭಾಕರ (ಕಾಮರೂಪಿ) ಅವರ 2ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿ, ಪತ್ರಕರ್ತರು ನೆಲದ ಸಂಕಟಕ್ಕೆ ಧ್ವನಿಯಾಗಬೇಕು. ಇದನ್ನು ಕಾಮರೂಪಿ ಮಾಡಿ ತೋರಿಸಿದರು. ಅವರೊಬ್ಬ ಅಂತಾರಾಷ್ಟ್ರೀಯ ಪತ್ರಕರ್ತ ಎಂದು ಬಣ್ಣಿಸಿದರು.

ಜಗತ್ತು ಹಲವು ತಲ್ಲಣ ಎದುರಿಸುತ್ತಿದೆ. ಮರ್ಯಾದೆಗೇಡು ಹತ್ಯೆ, ದಲಿತರ ಮೇಲೆ ದೌರ್ಜನ್ಯ, ಕೋಮು ಗಲಭೆ ಸೇರಿ ಹಲವು ಸಮಸ್ಯೆಗಳಿವೆ. ಈ ಕಾಲಘಟ್ಟದಲ್ಲಿ ಗಾಂಧಿ ಹಾಗೂ ಅಂಬೇಡ್ಕರ್​ ಅವರ ಪತ್ರಿಕೋದ್ಯಮದ ಶಾಂತಿ ಪತ್ರಿಕೋದ್ಯಮ ಬೇಕಿದೆ ಎಂದರು.

ಅಂಬೇಡ್ಕರ್​ ಹಾಗೂ ಗಾಂಧಿ ಹೋರಾಟದ ಜತೆಗೆ ಪತ್ರಕರ್ತರಾಗಿಯೂ ಕೆಲಸ ಮಾಡಿದ್ದರು. ಈಗ ಪತ್ರಿಕೋದ್ಯಮ ವಾಣಿಜ್ಯಿಕರಣಗೊಂಡಿದ್ದರೂ ಹೋರಾಟದ ಅಸ್ತ್ರವಾಗಿ ಉಳಿದಿದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್​ ಮಾತನಾಡಿ, ಹಿರಿಯರ ಬಗ್ಗೆ ಕಿರಿಯರಿಗೆ ಗೊತ್ತಾಗಬೇಕೆಂಬುದು ನಮ್ಮ ಉದ್ದೇಶ. ಕೋಲಾರದ ಪತ್ರಿಕೋದ್ಯಮ ಸುಂದರ ಹಾದಿ ನೆನಪಿಸಿಕೊಳ್ಳಬೇಕು ಎಂದರು.

ಪತ್ರಕರ್ತ ಹಾಗೂ ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಮಾತನಾಡಿ, ಕಾಮರೂಪಿ ಜಿಲ್ಲೆಯಲ್ಲಿ ಹುಟ್ಟಿ ಹೆಸರು ತಂದಿದ್ದಾರೆ. ಸಮರ್ಥ ಪತ್ರಕರ್ತರನ್ನು ಗುರುತಿಸಿ ಸಂಘದಿಂದ ಕಾಮರೂಪಿ ಹೆಸರಲ್ಲಿ ಒಂದು ರಾಜ್ಯ ಪ್ರಶಸ್ತಿ ಕೊಡಬೇಕು ಎಂದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್​.ಗಣೇಶ್​ ಮಾತನಾಡಿ, ಕಾಮರೂಪಿ ಸಾಹಿತಿಯಾಗಿ, ಪತ್ರಕರ್ತರಾಗಿ ಇವತ್ತಿಗೂ ಸಾಹಿತ್ಯಾಸಕ್ತರನ್ನು ಸೆಳೆಯುತ್ತಿದ್ದಾರೆ. ದಕ್ಷಿಣ ಆಫ್ರಿಕಾಕ್ಕೆ ತೆರಳಿ ನೆಲ್ಸನ್​ ಮಂಡೇಲಾ ಸಂದರ್ಶನ ಮಾಡಿದವರು. ಪ್ರತಿ ಪತ್ರಕರ್ತರು ಹಾಗೂ ಸಾಹಿತಿಗಳು ಕಾಮರೂಪಿ ಅವರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು ಎಂದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, 60ವರ್ಷಕ್ಕೆ ಸರ್ಕಾರಿ ನೌಕರರು ಹಾಗೂ ಪತ್ರಕರ್ತರು ಸುಸ್ತಾಗುವಷ್ಟು ಹಂತ ತಲುಪಿದ್ದಾರೆ. ಆದರೆ, ಕಾಮರೂಪಿ ಕೊನೆಯ ಕಾಲದಲ್ಲೂ ಬರವಣಿಗೆಯಲ್ಲಿ ತೊಡಗಿದ್ದರು ಎಂದರು.

ಪತ್ರಕರ್ತರು, ಓದುಗ-ಕೇಳುಗ ಬಳಗದವವರು, ಸಾಹಿತಿಗಳು, ಉಪನ್ಯಾಸಕರು ಹಾಗೂ ಹೋರಾಟಗಾರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net