

ಭಾರತದ ಆರ್ಥಿಕತೆ ಎಲ್ಲರ ನಿರೀಕ್ಷೆಗಳನ್ನೂ ಮೀರಿ ಬೆಳವಣಿಗೆ ದಾಖಲಿಸುತ್ತಿರುವುದು ಹೊಸ ಆಶಾವಾದವನ್ನೇ ಸೃಷ್ಟಿಸಿದೆ. 2023-24ರಲ್ಲಿ ಅಭಿವೃದ್ಧಿ ಹೊಂದಿದ ದೇಶಗಳ ಬೆಳವಣಿಗೆಯನ್ನೂ ಹಿಂದಿಕ್ಕಿ ಭಾರತ ಶೇಕಡ 8.2ರಷ್ಟು ವೃದ್ಧಿ ಕಂಡಿರುವುದು ಮಹತ್ವದ ಬೆಳವಣಿಗೆ. ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂದಾಜು ಮೀರಿ ಈ ಬೆಳವಣಿಗೆ ಆಗಿದ್ದು, 2024-25ನೇ ಆರ್ಥಿಕ ವರ್ಷದಲ್ಲಿ ಮತ್ತಷ್ಟು ಸಾಧನೆಯ ನಿರೀಕ್ಷೆ ಮೂಡಿಸಿದೆ.
ಉತ್ಪಾದನೆ, ಕಟ್ಟಡ ನಿರ್ಮಾಣ ಮುಂತಾದ ಕೆಲವು ಕ್ಷೇತ್ರಗಳು ಈ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. ಇದಕ್ಕೆ ಈ ಸಲದ ಉತ್ತಮ ಮುಂಗಾರು ಮತ್ತಷ್ಟು ವೇಗ ದೊರಕಿಸಿಕೊಡುವ ನಿರೀಕ್ಷೆ ಇದೆ. ಆದರೆ ದುರದೃಷ್ಟವಶಾತ್ ಕೃಷಿ ಕ್ಷೇತ್ರ ಹಿಂದುಳಿದಿದೆ. ಹೆಚ್ಚು ಜನರಿಗೆ ಉದ್ಯೋಗ ನೀಡಿರುವ ಸಾರಿಗೆ, ದೂರಸಂಪರ್ಕ, ಹೋಟೆಲ್ ಕ್ಷೇತ್ರಗಳ ಬೆಳವಣಿಗೆಯೂ ನಿಧಾನಗತಿಯಲ್ಲಿದೆ. ಈ ಅಂಶಗಳನ್ನು ಕೂಡ ಗಂಭೀರವಾಗಿ ಪರಾಮಶಿಸಬೇಕಿದೆ. ಅಭಿವೃದ್ಧಿಯ ಓಟದಲ್ಲಿ ಯಾವುದೇ ಕ್ಷೇತ್ರ ಹಿಂದುಳಿದರೂ, ಅದರಿಂದ ಹಲವು ಅಡ್ಡಪರಿಣಾಮಗಳು ಉಂಟಾಗುತ್ತವೆ ಎಂಬುದನ್ನು ಮರೆಯುವಂತಿಲ್ಲ.
ಕೃಷಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನಮ್ಮಲ್ಲಿ ರಾಜಕೀಯ ಭರವಸೆಗಳಿಗೆ ಕೊರತೆಯೇನಿಲ್ಲ. ಹಲವು ದಶಕಗಳಿಂದಲೂ ಕೇಳಿಬರುತ್ತಿರುವ ಇಂಥ ಆಶ್ವಾಸನೆಗಳು ಕೃಷಿರಂಗದ ಸ್ವಾಸ್ಥ್ಯವನ್ನು ಸುಧಾರಿಸಿಲ್ಲ ಎಂಬುದು ಕಟುವಾಸ್ತವ. ಕೃಷಿ ಕ್ಷೇತ್ರ ಮತ್ತು ರೈತರ ವಿಷಯ ಬಂದಾಗ ಭಾವನಾತ್ಮಕ ಸಂಗತಿಗಳಿಗೆ ಸರ್ಕಾರ ಹಾಗೂ ಪ್ರತಿಪಕ್ಷಗಳು ಆದ್ಯತೆ ನೀಡುತ್ತವೆಯೇ ಹೊರತು, ಕೃಷಿ ರಂಗವನ್ನು ನಷ್ಟದಿಂದ ಲಾಭದ ಹಳಿಗೆ ತರುವಂಥ ರಚನಾತ್ಮಕ ಪ್ರಯತ್ನಗಳು ನಡೆಯುವುದು ತೀರಾ ವಿರಳ. ಕೃಷಿ ಕ್ಷೇತ್ರದಲ್ಲಿ ವೆಚ್ಚವು ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದು, ಅದಕ್ಕೆ ತಕ್ಕಂತೆ ಆದಾಯ ರೂಪುಗೊಳ್ಳುತ್ತಿಲ್ಲ. ತಂತ್ರಜ್ಞಾನವು ಇನ್ನೂ ಕೃಷಿರಂಗವನ್ನು ಸಂಪೂರ್ಣವಾಗಿ ಆವರಿಸಿಕೊಂಡಿಲ್ಲ. ಹೀಗಾಗಿ, ಸ್ವಾತಂತ್ರ್ಯಪ್ರಾಪ್ತಿಯ 75 ವರ್ಷಗಳ ನಂತರವೂ ದೇಶದ ಬಹುತೇಕ ರಾಜ್ಯಗಳು ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿರುವುದು ಮತ್ತು ವರ್ಷದಿಂದ ವರ್ಷಕ್ಕೆ ಇಂಥ ಘಟನೆಗಳ ಸಂಖ್ಯೆ ಹೆಚ್ಚುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ.
ಆರ್ಥಿಕ ಅಭಿವೃದ್ಧಿಯ ಸಮತೋಲನದ ಪಥದಲ್ಲಿ ಸಾಗಿದಾಗ ಮಾತ್ರ ಸುಸ್ಥಿರ ವಿಕಾಸದ ಆಶಯ ಈಡೇರಲು ಸಾಧ್ಯ. ಈಗಿನ ಆರ್ಥಿಕ ಬೆಳವಣಿಗೆ ಆಶಾದಾಯಕ ಸಂಗತಿಯಾಗಿದ್ದರೂ, ಅದು ಕೆಲವೇ ಕ್ಷೇತ್ರಗಳಿಗೆ ಸೀಮಿತಗೊಳ್ಳಬಾರದು. ಎಲ್ಲ ರಂಗಗಳನ್ನು ಒಳಗೊಂಡ ಅಭಿವೃದ್ಧಿಯೇ ನಿಜವಾದ ಅಭ್ಯುದಯದ ಕಡೆಗೆ ಕೊಂಡೊಯ್ಯಬಲ್ಲದು. ದೇಶದಲ್ಲಿ ಚುನಾವಣೆಯ ಭರಾಟೆ ಮುಗಿದಿದ್ದು, ಫಲಿತಾಂಶ ಘೋಷಣೆ ಮಾತ್ರ ಬಾಕಿ ಇದೆ. ಇನ್ನು ಕೆಲವೇ ದಿನಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ ಹೊಸ ಸರ್ಕಾರ, ಆರ್ಥಿಕ ಬೆಳವಣಿಗೆಯಲ್ಲಿ ಎಲ್ಲ ಕ್ಷೇತ್ರಗಳ ಪಾಲು ಇರುವಂತೆ ನೋಡಿಕೊಳ್ಳುವುದು ತುಂಬ ಅಗತ್ಯ. ಈ ನಿಟ್ಟಿನಲ್ಲಿ ಸಮಗ್ರ ನೀತಿಯನ್ನು ರೂಪಿಸಿ ಜಾರಿಗೆ ತರಲಿ. ಕೃಷಿ ಕ್ಷೇತ್ರ ಬೆಳವಣಿಗೆಯ ಹೊಸ ಆಯಾಮವನ್ನು ಕಂಡುಕೊಳ್ಳಲಿ ಎಂಬುದೇ ಆಶಯ.