

ಚಿಕ್ಕಮಗಳೂರು: ಕಡು ಬಡವರೂ ಕ್ರೀಡೆಯಲ್ಲಿ ಸಾಧನೆ ಮಾಡಿದ್ದು,ಅವರನ್ನು ಸ್ಫೂರ್ತಿಯಾಗಿ ಪಡೆದು ವಿದ್ಯಾರ್ಥಿಗಳು ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾಗಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಬಸವನಹಳ್ಳಿ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಅವರ ಸ್ಮರಣಾರ್ಥ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಜೀವನ ಇಂದಿನ ಕ್ರೀಡಾಪಟುಗಳಿಗೆ ಮಾದರಿಯಾಗಿದೆ. ಬಡತನದಲ್ಲಿದ್ದ ಧ್ಯಾನ್‌ಚಂದ್ ಮರದ ಕೋಲನ್ನು ಮುರಿದು ಹಾಕಿ ಸ್ಟಿಕ್‌ಮಾಡಿಕೊಂಡು ಬಳ್ಳಿಯಲ್ಲಿದ್ದ ಕಾಯನ್ನೇ ಚೆಂಡಾಗಿ ಮಾಡಿಕೊಂಡು ದೇಶದ ಹೆಮ್ಮೆಯ ಕ್ರೀಡಾಪಟುವಾಗಿ ಬೆಳೆದರು ಎಂದರು.
ಶೈಕ್ಷಣಿಕ ಪ್ರಗತಿಗೆ ಸರ್ಕಾರ ಕಲ್ಪಿಸುತ್ತಿರುವ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ಸಾಧನೆಗೆ ಮುಂದಾಗಬೇಕು. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪಾಲಕರು ಹಾಗೂ ಶಿಕ್ಷಕರು ಉತ್ತೇಜನ ನೀಡಬೇಕು. ಅವರಲ್ಲಿನ ಪ್ರತಿಭೆ ಅನಾವಣಕ್ಕೆ ಸೂಕ್ತ ವೇದಿಕೆ ಕಲ್ಪಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಮನುಷ್ಯನಿಗೆ ವಿದ್ಯೆಯಷ್ಟೇ ಕ್ರೀಡೆಯೂ ಅಷ್ಟೇ ಮುಖ್ಯ. ಇತ್ತೀಚಿನ ದಿನಗಳಲ್ಲಿ ಸರ್ಕಾರ ಶಿಕ್ಷಣದಲ್ಲಿ ಕ್ರೀಡೆಯನ್ನು ಒಂದು ಭಾಗ ಎಂದು ಪರಿಗಣಿಸಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಕ್ರೀಡೆಗಳನ್ನು ಬದುಕಿನ ಭಾಗವಾಗಿಸಿಕೊಂಡು ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಕ್ರೀಡಾಪಟುಗಳಾಗಿ ಬೆಳೆಯಬೇಕು ಎಂದರು.
ಜಿಪಂ ಸಿಇಒ ಡಾ.ಬಿ.ಗೋಪಾಲಕೃಷ್ಣ ಮಾತನಾಡಿ, ಕ್ರೀಡೆಗಳಿಗೆ ಇರುವ ಶಕ್ತಿ ಮತ್ತು ಸಾಮರ್ಥ್ಯ ಬೇರೆ ಯಾವ ಕ್ಷೇತ್ರಗಳಿಗೂ ಇಲ್ಲ . ನಾವು ಶಿಸ್ತು ಸೇರಿದಂತೆ ಹಲವು ವಿಷಯಗಳನ್ನು ಕಲಿಯಬಹುದು. ಓದಿನ ಜತೆಗೆ ಕ್ರೀಡೆಗಳಲ್ಲೂ ಭಾಗವಹಿಸುವ ಮೂಲಕ ವ್ಯಕ್ತಿತ್ವವನ್ನು ವಿಕಸನ ಮಾಡಿಕೊಳ್ಳಬಹುದು ಎಂದರು. ಎಸ್‌ಪಿ ವಿಕ್ರಮ್‌ಅಮಟೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಡಾ.ಎಚ್.ಪಿ. ಮಂಜುಳಾ, ಪ್ರಾಚಾರ್ಯ ಸತೀಶ್ ಶಾಸ್ತ್ರಿ ಮತಿತರರು ಇದ್ದರು.