ಸಾಮರಸ್ಯ ಬೆಸೆಯುವ ಕಾರ್ಯವಾಗಲಿ

sahyadri
ರಾಜ್ಯಮಟ್ಟದ 8ನೇ ಕವಿ-ಕಾವ್ಯ ಸಂಭ್ರಮ, ಜನ್ನಕಾವ್ಯ ಪರೀಕ್ಷೆ ಕಾರ್ಯಕ್ರಮದಲ್ಲಿ ಕವಿ ಶಿ.ಜು.ಪಾಶಾ ಅವರಿಗೆ ಜನ್ನ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಟಿ.ಸತೀಶ್ ಜವರೇಗೌಡ, ಡಾ.ಕೆ.ಎನ್.ಮಂಜುನಾಥ್, ಡಾ.ಎಚ್.ಕೆ.ಹಸೀನಾ, ಅಬ್ದುಲ್ ತೋರಣಗಲ್ ಇತರರಿದ್ದರು.
Published on

ಶಿವಮೊಗ್ಗ: ಕನ್ನಡ ಭಾಷೆಗೆ ಮನಸ್ಸುಗಳನ್ನು ಬೆಸೆಯುವ ಶಕ್ತಿಯಿದೆ. ವರ್ತಮಾನದ ತಲ್ಲಣದ ಸಂದರ್ಭದಲ್ಲಿ ವಿಕೃತಿಗಳೇ ವಿಜೃಂಭಿಸಿರುವಾಗ ಸಾಹಿತ್ಯದ ಮೂಲಕ ಸಾಮರಸ್ಯ ಬೆಸೆಯಬೇಕಾಗಿದೆ ಎಂದು ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಟಿ.ಸತೀಶ್ ಜವರೇಗೌಡ ಹೇಳಿದರು.

ಹಾಸನದ ಮಾಣಿಕ್ಯ ಪ್ರಕಾಶನದಿಂದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ 8ನೇ ಕವಿ-ಕಾವ್ಯ ಸಂಭ್ರಮ, ಜನ್ನಕಾವ್ಯ ಪರೀಕ್ಷೆ ಮತ್ತು ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾಷೆಗೆ ನಮ್ಮೆಲ್ಲರನ್ನೂ ಪೊರೆಯುವ ಶಕ್ತಿಯಿದೆ. ಅದೊಂದು ಜೀವತಂತು. ಹಲವು ಕ್ರಾಂತಿಗಳ ಹಿಂದೆ ಸಾಹಿತ್ಯದ ಪ್ರೇರಕ ಶಕ್ತಿ ಇರುತ್ತದೆ. ಭಾಷೆ ಭಾವೈಕ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು.
ಕವಿ-ಕಾವ್ಯ ಸಂಭ್ರಮದ ಸರ್ವಾಧ್ಯಕ್ಷತೆ ವಹಿಸಿದ್ದ ಅಬ್ದುಲ್ ತೋರಣಗಲ್ಲು ಮಾತನಾಡಿ, ಕಾವ್ಯ ಬದುಕಿನ ಪ್ರತಿಬಿಂಬವಾಗಬೇಕು. ಅದು ಸ್ಪಂದನೆಯ ಗುಣವನ್ನು ಹೊಂದಿರಬೇಕು. ಸಮಾಜದ ಎಲ್ಲ ಜನರ ಪ್ರತಿಧ್ವನಿ ಆಗಬೇಕು. ಈ ನೆಲದ ಭಾಷೆ ಕನ್ನಡಕ್ಕೆ ಆ ಶಕ್ತಿಯಿದೆ. ಸಾವಿರಾರು ವರ್ಷಗಳಿಂದ ದಬ್ಬಾಳಿಕೆ ಎದುರಿಸಿಯೂ ಕನ್ನಡ ಜೀವಂತವಾಗಿದೆ. ಅದು ಸೊರಗಿರಬಹುದು. ಆದರೆ ಎಂದಿಗೂ ಸಾಯುವುದಿಲ್ಲ ಎಂದರು.
ಜನ್ನ ಕಾವ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್.ಮಂಜುನಾಥ್, ದತ್ತಿ ಪ್ರಶಸ್ತಿ ಹಾಗೂ ಇತರ ಪ್ರಶಸ್ತಿಗಳು ಲೇಖಕರ ಜವಾಬ್ದಾರಿಗಳನ್ನು ಹೆಚ್ಚಿಸುತ್ತವೆ. ಅನುಭವದ ಮೂಲಕ ಮೂಡಿಬಂದ ಸಾಹಿತ್ಯ ಯಾವಾಗಲೂ ಗಟ್ಟಿಯಾಗಿರುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕವಿ ಶಿ.ಜು.ಪಾಶ, ಮುತ್ತಣ್ಣ, ಸುಂದರಮ್ಮ, ಮನ್ಸೂರು ಮುಲ್ಕಿ, ಖಾಕಿ ಕವಿ ಮಂಜುನಾಥ ಅವರಿಗೆ ರಾಜ್ಯಮಟ್ಟದ ಜನ್ನ ಕಾವ್ಯ ಪ್ರಶಸ್ತಿ ನೀಡಲಾಯಿತು. ಸಮಾಜ ಸೇವಕಿ ಡಾ.ಟಿ.ನೇತ್ರಾವತಿ ಅವರನ್ನು ಸನ್ಮಾನಿಸಲಾಯಿತು. ಜತೆಗೆ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಕವಿ-ಕಾವ್ಯ ಸಂಭ್ರಮದ ಸಂಚಾಲಕಿ ಹಾಗೂ ಸಾಹಿತಿ ಡಾ.ಎಚ್.ಕೆ.ಹಸೀನಾ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಸೈಯ್ಯದ್ ಸನಾವುಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net