

ಕರೊನಾ ತಂದಿಟ್ಟಿರುವ ಸಂಕಷ್ಟ ಈಗಾಗಲೇ ಜನರ ಬದುಕನ್ನು ದುಸ್ತರಗೊಳಿಸಿದೆ. ಉದ್ಯೋಗನಷ್ಟ, ಸಂಬಳ ಕಡಿತ, ಉದ್ಯಮ-ವ್ಯಾಪಾರದಲ್ಲಿ ನಷ್ಟ, ಲಾಕ್ಡೌನ್ನಿಂದ ಸ್ತಬ್ಧವಾಗಿರುವ ಆರ್ಥಿಕ ಚಟುವಟಿಕೆಗಳು ಸೇರಿ ಹಲವು ಸಮಸ್ಯೆಗಳು ನಾಳೆಗಳ ದಾರಿಯ ಮೇಲೆ ದಟ್ಟವಾದ ಕಾಮೋಡ ಹರಡುವಂತೆ ಮಾಡಿವೆ. ಈ ನಡುವೆಯೇ ಕೆಲ ತಿಂಗಳುಗಳಿಂದ ಜೀವನಾವಶ್ಯಕ ಸಾಮಗ್ರಿಗಳ ಬೆಲೆ ಗಗನಮುಖಿಯಾಗಿದ್ದು, ಶ್ರೀಸಾಮಾನ್ಯರ ಬದುಕನ್ನು ಮತ್ತಷ್ಟು ಕಷ್ಟಕ್ಕೆ ದೂಡಿದೆ. ಕೆಲ ಸಮಯದಲ್ಲಿ ಬೆಲೆಯೇರಿಕೆ ನಿಯಂತ್ರಣಕ್ಕೆ ಬರಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಜನರ ಆದಾಯ, ಆರ್ಥಿಕ ಸ್ಥಿತಿ ತೀವ್ರವಾಗಿ ಕುಸಿದಿರುವಾಗ ದಿನದಿಂದ ದಿನಕ್ಕೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದು ಶೋಚನೀಯ.
ಮೇ ತಿಂಗಳಲ್ಲಿ 16 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದ ನಂತರ ಜೂನ್ ತಿಂಗಳಲ್ಲೂ ಬೆಲೆ ಹೆಚ್ಚುತ್ತಲೇ ಇವೆ. ಮಹಾರಾಷ್ಟ್ರ, ರಾಜಸ್ಥಾನ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶದ ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ ಲೀಟರ್ಗೆ ನೂರು ರೂಪಾಯಿಯ ಗಡಿ ದಾಟಿದೆ. ಶುಕ್ರವಾರ ಬೆಂಗಳೂರಿನಲ್ಲಿ ಪೆಟ್ರೋಲ್ ದರ -ಠಿ; 97.98ಕ್ಕೆ ತಲುಪಿದೆ. ಡೀಸೆಲ್ 90 ರೂ. ಗಡಿ ದಾಟಿದೆ. ಇಂಧನ ಬೆಲೆಯೇರಿಕೆಯ ಪರಿಣಾಮ ಹಲವು ಕ್ಷೇತ್ರಗಳ ಮೇಲಾಗಿದೆ. ಸ್ವಾಭಾವಿಕವಾಗಿಯೇ ಸರಕು ಸಾಗಾಣಿಕೆ, ಪ್ರಯಾಣದರ ಹೆಚ್ಚಾಗುತ್ತದೆ. ಎಲ್ಪಿಜಿ ಸಿಲಿಂಡರ್ ಬೆಲೆಯಂತೂ ಹೆಚ್ಚುತ್ತಲೇ ಸಾಗಿದ್ದು, ಮಧ್ಯಮವರ್ಗಿಯರ ಬಜೆಟ್ನ್ನೇ ಡೋಲಾಯಮಾನಗೊಳಿಸಿದೆ. 900ರ ಸನಿಹಕ್ಕೆ ಎಲ್ಪಿಜಿ ಸಿಲಿಂಡರ್ ಬೆಲೆ ತಲುಪಿದ್ದು, ಜನಸಾಮಾನ್ಯರು ಚಿಂತಿತರಾಗಿದ್ದಾರೆ.
ಬೆಲೆಯೇರಿಕೆಯ ಸರಣಿ ಇಷ್ಟಕ್ಕೆ ಮುಗಿಯುವುದಿಲ್ಲ. ಪ್ರತಿ ಲೀಟರ್ ಅಡುಗೆ ಎಣ್ಣೆ ಬೆಲೆ 200ರ ಆಸುಪಾಸಿನಲ್ಲಿದೆ. ಹಾಗಾಗಿ, ಗೃಹಿಣಿಯರು ಅಡುಗೆಮನೆ ನಿರ್ವಹಿಸುವುದೇ ಕಷ್ಟವಾಗಿದೆ. ಹೋಟೆಲ್ ಉದ್ಯಮದ ಮೇಲೂ ವ್ಯತಿರಿಕ್ತ ಪರಿಣಾಮ. ಬೇಳೆಕಾಳು, ಆಹಾರ ಪದಾರ್ಥ, ಹಣ್ಣು-ತರಕಾರಿಗಳ ಬೆಲೆಯೂ ಏರುತ್ತಲೇ ಸಾಗಿದೆ. ನಿರ್ಮಾಣ ಹಂತದ ಚಟುವಟಿಕೆಗಳಿಗೆ ಬೆಲೆಯೇರಿಕೆಯಿಂದ ತೀವ್ರ ಹಿನ್ನಡೆ ಆಗಿದೆ. ಜನಸಾಮಾನ್ಯರು ನಿರ್ಮಾಣ ಕಾಮಗಾರಿ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅಷ್ಟಕ್ಕೂ, ಇವೆಲ್ಲ ದಿಢೀರಾಗಿ ಸಂಭವಿಸಿದ ಬೆಳವಣಿಗೆಗಳೇನಲ್ಲ. ಅವಶ್ಯ ವಸ್ತುಗಳು ತುಟ್ಟಿಯಾಗುತ್ತಿರುವುದನ್ನು ಆರಂಭಿಕ ಹಂತದಲ್ಲೇ ಗಂಭೀರವಾಗಿ ಪರಿಗಣಿಸಿ, ಸೂಕ್ತ ನಿಯಂತ್ರಣ ಕ್ರಮಕ್ಕೆ ಮುಂದಾಗಿದ್ದಲ್ಲಿ ಪರಿಸ್ಥಿತಿ ಇಷ್ಟು ವಿಕೋಪಕ್ಕೆ ಹೋಗುತ್ತಿರಲಿಲ್ಲ ಎಂಬುದು ವಾಸ್ತವ. ಕರೊನಾ ವಿರುದ್ಧ ಹೋರಾಡುವುದು, ಸೋಂಕು ಪ್ರಸರಣ ನಿಯಂತ್ರಣಕ್ಕೆ ತರುವುದು, ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಕೇಂದ್ರ, ರಾಜ್ಯ ಸರ್ಕಾರಗಳ ಈಗಿನ ಮೊದಲ ಆದ್ಯತೆಯೇನೋ ನಿಜ. ಹಾಗಂತ ಬೆಲೆಯೇರಿಕೆ ನಿಯಂತ್ರಣಕ್ಕೆ ಸಕಾಲದಲ್ಲಿ ಕ್ರಮ ಕೈಗೊಳ್ಳದಿದ್ದರೆ ಜನಸಾಮಾನ್ಯರು ಜೀವನ ನಡೆಸುವುದು ಹೇಗೆ? ಜೀವನ ನಿರ್ವಹಣೆಗಾಗಿ ಮತ್ತಷ್ಟು ಸಾಲ ಮಾಡುತ್ತ, ಅಸಂಖ್ಯ ಕುಟುಂಬಗಳು ಆರ್ಥಿಕವಾಗಿ ಶೋಚನೀಯ ಸ್ಥಿತಿಗೆ ತಲುಪುತ್ತವೆ. ಈ ಸ್ಥಿತಿ ಮತ್ತಷ್ಟು ಗಂಭೀರವಾಗುವ ಮುನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡು, ಸೂಕ್ತ ಕ್ರಮಕ್ಕೆ ಮುಂದಾಗಲಿ.