ಅಪೌಷ್ಟಿಕಮುಕ್ತ ಭಾರತಕ್ಕೆ ಎಲ್ಲರೂ ಕೈಜೋಡಿಸಲಿ

14HDK 02
ಎಚ್.ಡಿ.ಕೋಟೆ ತಾಲೂಕಿನ ಹೀರೇಹಳ್ಳಿ ಹಾಡಿಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ದಲ್ಲಿ ಬಿ.ಸಂದೇಶ್‌ಪ್ರಭು ಮಾತನಾಡಿದರು. ಕೆ.ಜೆ.ಸತೀಶ್, ಡಾ.ರವಿಕುಮಾರ್ ಇದ್ದರು.
Published on

ಎಚ್.ಡಿ.ಕೋಟೆ: ಅಪೌಷ್ಟಿಕಮುಕ್ತ ಭಾರತಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ಸಂದೇಶ್ ಪ್ರಭು ಮನವಿ ಮಾಡಿದರು.

ಮಕ್ಕಳ ಅಪೌಷ್ಟಿಕತೆ ತಡೆಗಟ್ಟುವ ಕುರಿತು ಕಾನೂನು ಸೇವಾ ಸಮಿತಿ, ಸರ್ಕಾರಿ ಅಭಿಯೋಜನಾ ಹಾಗೂ ಆರೋಗ್ಯ ಇಲಾಖೆ ವತಿಯಿಂದ ತಾಲೂಕಿನ ಹೀರೇಹಳ್ಳಿ ಹಾಡಿಯ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಿದ್ದು, ಈ ಬಗ್ಗೆ ಅರಿವು ಮೂಡಿಸಬೇಕು. ಅಲ್ಲದೆ ಮನೆ ಮನೆಗೆ ಭೇಟಿ ಮಾಡಿ ಜನರಿಗೆ ಆರೋಗ್ಯ ಶಿಕ್ಷಣದ ಬಗ್ಗೆ ಮಾಹಿತಿ ನೀಡಬೇಕು. ಜತೆಗೆ ಸರ್ಕಾರದಿಂದ ಸಿಗುವ ಯೋಜನೆಗಳ ಬಗ್ಗೆ ತಿಳಿಸಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ಸಮುದಾಯದ ಪ್ರತಿಯೊಬ್ಬರಿಗೂ ಪೋಷಕಾಂಶಯುಕ್ತ ಆಹಾರ ಸೇವನೆ ಬಗ್ಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶ. ಜನಸಾಮಾನ್ಯರ ಆರೋಗ್ಯ ಮಟ್ಟವನ್ನು ಉತ್ತಮ ಪಡಿಸುವುದು ಹಾಗೂ ಪೋಷಕಾಂಶ ಕೊರತೆಯಿಂದ ಬಳಲುವ ಗರ್ಭಿಣಿಯರು ಮತ್ತು ರಕ್ತಹೀನತೆಯಿಂದ ಬಳಲುವ ತಾಯಿ ಹಾಗೂ ಶಿಶು ಮರಣವನ್ನು ತಪ್ಪಿಸುವುದು ಇದರ ಬಹುಮುಖ್ಯ ಉದ್ದೇಶ ಎಂದರು.

ಜನರು ಸ್ಥಳೀಯವಾಗಿ ಸಿಗುವ ಸೊಪ್ಪು ತರಕಾರಿ, ಮೊಳಕೆ ಕಾಳುಗಳನ್ನು ಸೇವಿಸಬೇಕು. ಅಂಗನವಾಡಿಯಲ್ಲಿ ಕೊಡುವ ಆಹಾರ ಪದಾರ್ಥವನ್ನು ಮಕ್ಕಳಿಗೆ ನೀಡುವುದರ ಜತೆಗೆ ನೀವೂ ಸೇವಿಸಬೇಕು ಎಂದು ತಿಳಿಸಿದರು.

ಮಗುವಿನ ಬೆಳವಣಿಗೆಯಲ್ಲಿ ತಾಯಿ ಪಾತ್ರ ಮುಖ್ಯವಾದುದು. ಆರು ತಿಂಗಳ ತನಕ ತಾಯಿ ಹಾಲು ಬಿಟ್ಟು ಬೇರೇನೂ ಕುಡಿಸಬಾರದು. ಆ ಬಳಿಕ ತಾಯಿ ಹಾಲಿನ ಜತೆಗೆ ಪೂರಕ ಆಹಾರವನ್ನೂ ಕೊಡಬೇಕು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ ನೀಡುವಾಗ ಜನರಿಗೆ ಪೌಷ್ಟಿಕ ಆಹಾರದ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿವಿಲ್ ನ್ಯಾಯಾಧೀಶ ಕೆ.ಜಿ.ಸತೀಶ್ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ನಾಗೇಶ್, ಹಿರಿಯ ವಕೀಲ ಎಂ.ಮಹದೇವ್, ವಕೀಲರ ಸಂಘದ ಸದಸ್ಯ ಕಾರ್ಯದರ್ಶಿ ದಿನೇಶ್, ಖಜಾಂಚಿ ಚಲುವಪ್ಪ, ಜಂಟಿ ಕಾರ್ಯದರ್ಶಿ ಲೋಕೇಶ್, ಪ್ಯಾನಲ್ ವಕೀಲರಾದ ಸರಸ್ವತಿ, ಮಣಿರಾಜ್, ಕುಮಾರ್, ಆರೋಗ್ಯ ಇಲಾಖೆ ಸಿಬ್ಬಂದಿ ಹನುಮಂತು ಅರಳಪ್ಪ, ರವಿರಾಜ್, ಸರಸ್ವತಿ, ನಾಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net