

ಕೆ.ಆರ್.ಸಾಗರ : ಹಗಲು ಹೊತ್ತು ಕಚ್ಚುವ ಈಡಿಸ್ ಜಾತಿಯ ಸೊಳ್ಳೆಗಳು ಡೆಂೆಯಂತಹ ಮರಣಾಂತಿಕ ಕಾಯಿಲೆಗಳನ್ನುಂಟು ಮಾಡಬಲ್ಲವು. ಸೊಳ್ಳೆಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಬೇಕೆಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಪ್ರಫುಲ್ಲಾ ಹೇಳಿದರು.
ಕೆ.ಆರ್.ಸಾಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಜನತಾ ಕಾಲನಿಯ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡೆಂೆ ವಿರೋಧಿ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಮಾತನಾಡಿ ಈಡಿಸ್ ಲಾರ್ವಾ ಪ್ರಾತ್ಯಕ್ಷಿಕೆಯೊಂದಿಗೆ ಸೊಳ್ಳೆಗಳ ಜೀವನ ಚಕ್ರ ತಿಳಿಸಿ, ಈ ಜಾತಿಯ ಸೊಳ್ಳೆಗಳು ಸ್ವಚ್ಛ ನೀರಿನಲ್ಲಿ ತಮ್ಮ ಸಂತಾನ ಅಭಿವೃದ್ಧಿಯನ್ನು ಮಾಡುತ್ತವೆ. ಅದಕ್ಕಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಮತ್ತು ಘನ ತ್ಯಾಜ್ಯ ವಸ್ತುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಿ ಹಾಗೂ ಮನೆಯಲ್ಲಿ ನೀರು ಸಂಗ್ರಹ ಪಾತ್ರೆ, ವಸ್ತುಗಳನ್ನು ತೆರೆದಿಡಬಾರದು, ವಾರಕ್ಕೊಂದು ದಿನ ಸ್ವಚ್ಛವಾಗಿ ಉಜ್ಜಿ ತೊಳೆದು ಒಣಗಿಸಿ ನಂತರ ನೀರನ್ನು ಭರ್ತಿ ಮಾಡಿ ಜತೆಗೆ ಭದ್ರವಾಗಿ ಮುಚ್ಚಿಡಬೇಕು. ಯಾವುದೇ ಜ್ವರ ಇರಲಿ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಚಂದನ್ ಮಾತನಾಡಿದರು. ಗ್ರಾಪಂ ಸದಸ್ಯೆ ರಾಣಿ, ಮುಖಂಡ ಶ್ರೀನಿವಾಸ್, ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಜ್ಯೋತಿ ಗೌಡ, ಅಂಗನವಾಡಿ ಕಾರ್ಯಕರ್ತೆಯರಾದ ಲಕ್ಷ್ಮೀ ಮೋಹನ್ ಕುಮಾರಿ, ನೇತ್ರಾವತಿ ಹಾಗೂ ಆಶಾ ಕಾರ್ಯಕರ್ತೆ ರೂಪಾ ಜಯಲಕ್ಷ್ಮೀ, ಲತಾ ಹಾಗೂ ಬಡಾವಣೆಯ ಸಾರ್ವಜನಿಕರು ಉಪಸ್ಥಿತರಿದ್ದರು.