

ಬನ್ನೂರು: ಸಮಾಜದ ಅಭಿವೃದ್ಧಿ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೊಡುಗೆಗಳನ್ನು ನೀಡಬೇಕು ಎಂದು ಚಿತ್ರನಟ ನೆನಪಿರಲಿ ಖ್ಯಾತಿಯ ಪ್ರೇಮ್ ಹೇಳಿದರು.
ಮೈಸೂರಿನ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ, ಬನ್ನೂರಿನ ರೋಟರಿ ಸಂಸ್ಥೆ, ಗ್ರೀನ್‌ಲ್ಯಾಂಡ್ ಸಂಸ್ಥೆ ಹಾಗೂ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬುಧವಾರ ಕಾನ್‌ಸಿಂಗ್ ರಾಜ್‌ಪುರೋಹಿತ್‌ರ 15ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ಪ್ರತಿಯೊಬ್ಬರಿಗೂ ತನ್ನ ನೆಲದ ಋಣ ತೀರಿಸುವ ಇಂಗಿತ ಇರಬೇಕು. ಕಣ್ಣು ಮನುಷ್ಯನ ಪ್ರಮುಖ ಅಂಗವಾಗಿದ್ದು, ಪ್ರತಿಯೊಬ್ಬರೂ ಕಣ್ಣಿನ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿ, ತಮ್ಮ ತಂದೆ ಕಾನ್‌ಸಿಂಗ್‌ಜೀ ರಾಜ್‌ಪುರೋಹಿತ್‌ರ 15ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಸ್ತ್ರಚಿಕಿತ್ಸೆಯ ಅಗತ್ಯ ಉಳ್ಳವರಿಗೆ ಕೊಯಮತ್ತೂರಿನಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದು, ಉಚಿತ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸುತ್ತಮುತ್ತಲಿನ ಗ್ರಾಮದ ಸಾಕಷ್ಟು ಜನರು ಕಣ್ಣಿನ ಪರೀಕ್ಷೆಗೆ ಒಳಗಾದರು. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ 100 ಜನರನ್ನು ಕೊಯಮತ್ತೂರಿಗೆ ಕಳುಹಿಸಲಾಯಿತು.
ಗೌರಿದೇವಿ ಕಾನ್‌ಸಿಂಗ್, ರಾಜೇಶ್‌ಸಿಂಗ್, ವನ್ಯಸಿಂಗ್, ವಿರಾಟ್‌ಸಿಂಗ್, ಡಾ. ಗುರುಬಸವರಾಜು, ರೋಟರಿ ಅಧ್ಯಕ್ಷ ಕೃಷ್ಣೇಗೌಡ, ಡಾ.ವಿಕಾಸ್, ವಿವೇಕಾನಂದ ಶಿಕ್ಷಣ ಸಂಸ್ಥೆಯ ಸ್ಥಾಪಕ ಪ್ರಕಾಶ್, ಪ್ರಾಂಶುಪಾಲ ರಂಗನಾಥ್ ಇತರರು ಇದ್ದರು.