ಪದವಿಗಳು ಜೀವನದ ಮಾರ್ಗವಾಗಲಿ; ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸಲಹೆ

ತುಮಕೂರು ವಿವಿ ಸಮಾಜಕಾರ್ಯ ವಿಭಾಗ ಆಯೋಜಿಸಿರುವ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಎ.ನಾರಾಯಣಸ್ವಾಮಿ ಚಾಲನೆ ನೀಡಿದರು. ಪ್ರೊ.ಎಂ.ವೆಂಕಟೇಶ್ವರಲು, ನಹಿದಾ ಜಮ್‌ಜಮ್, ಮುರಳಿ ದೇಸಾಯಿ, ಐ.ಎ.ಷರೀಪ್ ಮತ್ತಿತರರು ಇದ್ದರು.
ತುಮಕೂರು ವಿವಿ ಸಮಾಜಕಾರ್ಯ ವಿಭಾಗ ಆಯೋಜಿಸಿರುವ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಎ.ನಾರಾಯಣಸ್ವಾಮಿ ಚಾಲನೆ ನೀಡಿದರು. ಪ್ರೊ.ಎಂ.ವೆಂಕಟೇಶ್ವರಲು, ನಹಿದಾ ಜಮ್‌ಜಮ್, ಮುರಳಿ ದೇಸಾಯಿ, ಐ.ಎ.ಷರೀಪ್ ಮತ್ತಿತರರು ಇದ್ದರು.
Published on

 ತುಮಕೂರು: ಸಾಮಾಜಿಕ ಸಮಸ್ಯೆಗಳ ಪತ್ತೆ ಹಾಗೂ ಅದರ ಪರಿಹಾರದ ಬಗ್ಗೆ ವೈಜ್ಞಾನಿಕ ಅಧ್ಯಯನ ಮೂಲಕ ಸಮಾಜಕಾರ್ಯ ಪ್ರಸ್ತುತ ಜಗತ್ತಿನ ಅಗತ್ಯದ ಕೋರ್ಸ್ ಎನಿಸಿಕೊಂಡಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ತುಮಕೂರು ವಿವಿ ಡಾ.ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಸಮಾಜಕಾರ್ಯ ಅಧ್ಯಯನ ಹಾಗೂ ಸಂಶೋಧನಾ ವಿಭಾಗ, ನಿಮ್ಹಾನ್ಸ್ ಹಾಗೂ ಇಂಡಿಯನ್ ಸೊಸೈಟಿ ಆಫ್ ಪ್ರೊೆಷನಲ್ ಸೋಶಿಯಲ್ ವರ್ಕ್ ಸಹಯೋಗದಲ್ಲಿ ‘ಶಿಕ್ಷಣದಲ್ಲಿ ಸಮಾಜಕಾರ್ಯ’ ವಿಷಯ ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ವೃತ್ತಿಪರ ಸಮಾಜಕಾರ್ಯದ ಅಧ್ಯಯನದ ಮೂಲಕ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆಯಿದೆ, ಈ ನಿಟ್ಟಿನಲ್ಲಿ ದೇಶದ ಎಲ್ಲ ಸಮಾಜ ಕಾರ್ಯಕರ್ತರು ಒಟ್ಟಾಗಿ ಸೇರುವ ಇಂತಹ ರಾಷ್ಟ್ರೀಯ ಸಮ್ಮೇಳನಗಳು ಸಹಾಯಕವಾಗಿವೆ ಎಂದರು.

ತುಮಕೂರು ವಿವಿ ದೇಶದ ಬಹುತೇಕ ಎಲ್ಲ ಸಂಪನ್ಮೂಲ ವ್ಯಕ್ತಿಗಳನ್ನು ತುಮಕೂರಿನಲ್ಲಿ ಸಮಾವೇಶಗೊಳಿಸಿದೆ, ಸಿದ್ಧಗಂಗಾ ಕ್ಷೇತ್ರದ ಸಾಮಾಜಿಕ ಕಾರ್ಯಗಳು ಸಮಾಜಕಾರ್ಯಕರ್ತರಿಗೆ ಪ್ರೇರಣೆಯಾಗಲಿ ಎಂದರು.

ಪದವಿಗಳು ಉದ್ಯೋಗ ಪಡೆಯಲು ಸೀಮಿತವಾಗದೆ, ಜೀವನದ ಮಾರ್ಗವಾಗಬೇಕು, ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮೂಡಿಸದ ಶಿಕ್ಷಣ ಉಪಯೋಗವಿಲ್ಲ ಎಂದು ಸಲಹೆ ನೀಡಿದರು.

ಶಿಕ್ಷಣ ಮಹತ್ವದ ಬಗ್ಗೆ ಚರ್ಚೆ ನಡೆಯುತ್ತಿದೆ, ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಸಮಾಜಕಾರ್ಯ ಹಾಗೂ ವೃತ್ತಿಪರ ಸಮಾಜಕಾರ್ಯಕರ್ತರು ಕೊಡುಗೆ ನೀಡಲಿ ಎಂದರು.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ದೇಶದ ವಿವಿಧ ಭಾಗದ 1200 ವೃತ್ತಿಪರ ಸಮಾಜಕಾರ್ಯಕರ್ತರು ಭಾಗವಹಿಸಿರುವ ರಾಷ್ಟ್ರೀಯ ಸಮ್ಮೇಳನ ಐತಿಹಾಸಿಕ ಎನ್ನಿಸಿದ್ದು ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುವ ವಿಶ್ವಾಸವಿದೆ ಎಂದರು.

ಮುಂಬೈ ಟಿಐಎಸ್‌ಎಸ್ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಮುರಳಿ ದೇಸಾಯಿ ದಿಕ್ಸೂಚಿ ಭಾಷಣ ಮಾಡಿದರು.

ನಿಮ್ಹಾನ್ಸ್ ನಿವೃತ್ತ ಪ್ರಾಧ್ಯಾಪಕ ಐ.ಎ.ಶರೀಪ್, ಕುಲಸಚಿವೆ ನಯಿದಾ ಜಮ್ಜಮ್ ,

ನಿಮ್ಹಾನ್ಸ್ ಪ್ರಾಧ್ಯಾಪಕ ಪ್ರೊ.ಎನ್.ಜನಾರ್ಧನ್, ತುಮಕೂರು ವಿವಿ ಪ್ರಾಧ್ಯಾಪಕ ಪ್ರೊ.ಬಿ.ರಮೇಶ್ ಇದ್ದರು.

ನಾನು ಸಚಿವನಲ್ಲ, ಸಮಾಜಕಾರ್ಯಕರ್ತ, ಸಮಾಜಕ್ಕೆ ಶಿಕ್ಷಣ ನೀಡುವ ಕಾರ್ಯವನ್ನು ಜನಪ್ರತಿನಿಧಿಗಳೂ ಮಾಡಬೇಕು. ಆದರೆ, ವೃತ್ತಿಪರ ಸಮಾಜಕಾರ್ಯಕರ್ತರು ಪರಿಣಾಮಕಾರಿಯಾಗಿ ಈ ಕಾರ್ಯ ಮಾಡಬಲ್ಲರು. ಹಾಗಾಗಿ, ಇಂತಹ ಸಮ್ಮೇಳನಗಳ ಸದುಪಯೋಗ ಪಡೆಯಬೇಕು. ಸರ್ಕಾರಗಳಿಗೆ ಪರ್ಯಾಯವಾಗಿ ಸಾಕಷ್ಟು ಸರ್ಕಾರೇತರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ, ಈ ಸಂಸ್ಥೆಗಳು ವೃತ್ತಪರ ಸಮಾಜಕಾರ್ಯಕರ್ತ ಮೂಲಕ ಚಲನಶೀಲವಾದರೆ ಸಾಮಾಜಿಕ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಲಭ್ಯವಾಗಲಿದೆ. ಎ.ನಾರಾಯಣಸ್ವಾಮಿ ಕೇಂದ್ರ ಸಚಿವ

ಉದ್ಯೋಗಕ್ಕೆ ಕೌಶಲ ಅಗತ್ಯ: ವೃತ್ತಿಪರ ಸಮಾಜಕಾರ್ಯಕರ್ತರು ಅಳವಡಿಸಿಕೊಳ್ಳಬಹುದಾದ ಕೌಶಲಗಳು, ಸಮಸ್ಯೆಗಳ ಪತ್ತೆ ಹಾಗೂ ವೈಜ್ಞಾನಿಕ ಪರಿಹಾರದ ಜವಾಬ್ದಾರಿ ವೃತ್ತಿಪರ ಸಮಾಜಕಾರ್ಯಕರ್ತರ ಮೇಲಿದೆ ಎಂದು ವಿಶ್ರಾಂತಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಹೇಳಿದರು. ಉದ್ಯೋಗಕ್ಕೆ ಕೌಶಲ ಅಗತ್ಯವಾಗಿದ್ದು ಉದ್ಯೋಗಕಷ್ಟೇ ಅಲ್ಲದೆ ಜೀವನಕ್ಕೂ ಅಗತ್ಯವಾದ ತತ್ವಗಳನ್ನು ಸಮಾಜಕಾರ್ಯ ಶಿಕ್ಷಣ ನೀಡುತ್ತಿದೆ ಎಂದರು. 21ನೇ ಶತಮಾನ ಜ್ಞಾನದ ಯುಗವಾಗಿದ್ದು, ಜಾಗತಿಕ ಬೆಳೆವಣಿಗೆಯ ಬಗ್ಗೆ ವಿದ್ಯಾರ್ಥಿಗಳು ಅರಿವು ಬೆಳೆಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು. ಸಮಾಜಕಾರ್ಯ ಕೌನ್ಸಿಲ್ ಕಾಯ್ದೆ ಜಾರಿಯ ಅಗತ್ಯವಿದ್ದು, ನೂತನ ಶಿಕ್ಷಣ ನೀತಿ ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಟೆಯನ್ನು ಹೆಚ್ಚಿಸಿದೆ, ದೇಶದಲ್ಲಿ ಶೇ.62 ಯುವಕರಿದ್ದು ಶಿಕ್ಷಣ ಕ್ಷೇತ್ರದ ಕ್ರಾಂತಿಗೆ ಕಾರಣವಾಗಲಿದೆ ಎಂದರು.

ಸಮಾಜಕಾರ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಸಂಶೋಧನೆಗಳನ್ನು ನೀಡಿದ್ದು, ಈ ನಡುವೆ ತುಮಕೂರು ವಿವಿ ರಾಷ್ಟ್ರೀಯ ಸಮ್ಮೇಳನ ಆಯೋಜಿಸಿದ್ದು ದೇಶದ ಸಂಪನ್ಮೂಲ ವ್ಯಕ್ತಿಗಳು ಭಾಗಹಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಈ ಸಂದರ್ಭದಲ್ಲಿ ಸಮಾಜ ಕಾರ್ಯಕರ್ತರ ಪಾತ್ರ ಹಾಗೂ ಉದ್ಯೋಗ ಸೃಷ್ಟಿಯ ಬಗ್ಗೆ ಮಹತ್ವದ ಚರ್ಚೆಗಳು ನಡೆಯಲಿದ್ದು ಸಮ್ಮೇಳನದ ನಿರ್ಣಯಗಳ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಪ್ರೊ.ಕೆ.ಜಿ.ಪರಶುರಾಮ ವಿಭಾಗದ ಮುಖ್ಯಸ್ಥ

1200 ಸಮಾಜಕಾರ್ಯಕರ್ತರ ಸಂಗಮ: ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದೇಶದೆಲ್ಲೆಡೆ ಇರುವ ವೃತ್ತಿಪರ ಸಮಾಜ ಕಾರ್ಯಕರ್ತರು ಒಂದೇ ವೇದಿಕೆಯಲ್ಲಿ ಸಮಾವೇಶಗೊಂಡಿದ್ದಾರೆ. ತುಮಕೂರು ವಿವಿ ಸಮಾಜಕಾರ್ಯ ವಿಭಾಗದ ಆಯೋಜಿಸಿರುವ ರಾಷ್ಟ್ರೀಯ ಸಮ್ಮೇಳನದಲ್ಲಿ ಹಿರಿಯ ಸಮಾಜ ಕಾರ್ಯಕರ್ತರು, ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಸೇರಿ ಒಟ್ಟು 1200ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net