ಕಾಂಗ್ರೆಸ್ ಸಂಸದ ಕುಮಾರನಾಯಕ ರಾಜೀನಾಮೆ ನೀಡಲಿ: ಆರ್.ಅಶೋಕ್ ಆಗ್ರಹ | Name mentioned in Lokayukta report

LOP R Ashok
Published on

ಬೆಂಗಳೂರು: ಮುಡಾ ನಿವೇಶನಗಳ ಹಂಚಿಕೆ ಪ್ರಕರಣ ತನಿಖೆ ನಡೆಸಿ ಲೋಕಾಯುಕ್ತ ಸಲ್ಲಿಸಿದ ವರದಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ, ಸಂಸದ ಜಿ.ಕುಮಾರನಾಯಕ ಹೆಸರಿದ್ದು, ಕೂಡಲೇ ಅವರ ರಾಜೀನಾಮೆ ಪಡೆಯಬೇಕು ಎಂದು ಕಾಂಗ್ರೆಸ್ ನಾಯಕರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಮುಡಾದಿಂದ ಅಕ್ರಮವಾಗಿ ನಿವೇಶನ ಹಂಚಿಕೆಯಾಗಿರುವ ಪ್ರಕರಣದಲ್ಲಿ ಅಂದಿನ ಮೈಸೂರು ಜಿಲ್ಲಾಧಿಕಾರಿ, ಹಾಲಿ ಕಾಂಗ್ರೆಸ್ ಸಂಸದ ಜಿ.ಕುಮಾರನಾಯಕ ಕರ್ತವ್ಯಲೋಪ ಎಸಗಿರುವುದು ಲೋಕಾಯುಕ್ತ ವರದಿಯಲ್ಲಿ ಸಾಬೀತಾಗಿದೆ.

ಈ ಹಿನ್ನೆಲೆಯಲ್ಲಿ ಕುಮಾರನಾಯಕ ರಾಜೀನಾಮೆ ಪಡೆಯಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಒತ್ತಾಯಿಸಿದ್ದು, ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪಿಸಿರುವಂತೆ ಜಿ.ಕುಮಾರನಾಯಕ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದೂ ಆರ್.ಅಶೋಕ್ ಹೇಳಿದ್ದಾರೆ.

ರಾಜಣ್ಣ ಹೇಳಿಕೆ ಗಮನಾರ್ಹ

ಮುಡಾ ಅಕ್ರಮದಲ್ಲಿ ಲೋಕಾಯುಕ್ತ ಪೊಲೀಸರು ಬಿ-ರಿಪೋರ್ಟ್ ಸಲ್ಲಿಸಿ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬೀಗುತ್ತಿದ್ದಾರೆ. ಆದರೆ ಲೋಕಾಯುಕ್ತ ತನಿಖೆ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದನ್ನು ಒಮ್ಮೆ ಸಿಎಂ ಗಮನಿಸಬೇಕು ಎಂದು ಆರ್.ಅಶೋಕ್ ಕಾಲೆಳೆದಿದ್ದಾರೆ.

ಯಾವುದೇ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಕೊಡುವುದೂ ಒಂದೇ ಸ್ಮಶಾನಕ್ಕೆ ಹೋಗುವುದೂ ಒಂದೇ ಎನ್.ರಾಜಣ್ಣ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಆ ಮೂಲಕ ಮುಡಾ ಹಗರಣವನ್ನು ಹೇಗೆ ಮುಚ್ಚಿ ಹಾಕಿ ಸತ್ಯಸಮಾಧಿ ಮಾಡಲು ಹೊರಟಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಈಗಲಾದರೂ ಹಗರಣವನ್ನು ಸಿಬಿಐಗೆ ಒಪ್ಪಿಸಿ, ತನಿಖೆ ಎದುರಿಸಬೇಕು. ಸತ್ಯವಂತರಾಗಿದ್ದರೆ ಸಿಬಿಐ ತನಿಖೆಗೆ ಭಯವೇಕೆ ? ಎಂದು ಸಿಎಂ ಸಿದ್ದರಾಮಯ್ಯಗೆ ಆರ್.ಅಶೋಕ್ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net