

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೇಳಿ, ಸಿಎಂ ವಿರುದ್ಧ ತನಿಖೆಗೆ ರಾಜ್ಯಪಾಲರು ನೀಡಿದ ಆದೇಶ ಎತ್ತಿ ಹಿಡಿದಿದೆ. ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲ ತಿಂಗಳಿಂದ ಭ್ರಷ್ಟ ಕಾಂಗ್ರೆಸ್ ವಿರುದ್ಧ ಬಿಜೆಪಿ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. ಮೊದಲಿಗೆ ವಾಲ್ಮೀಕಿ ನಿಗಮದ ಹಗರಣ ನಂತರ ಮುಡಾ ಹಗರಣ ವಿರುದ್ಧ ಕೈಗೆತ್ತಿಕೊಂಡೆವು.
ಮುಡಾ ಅಕ್ರಮದಲ್ಲಿ ಸ್ವತಃ ಸಿಎಂ ಕುಟುಂಬವೇ ನೇರವಾಗಿ ಭಾಗಿಯಾಗಿತ್ತು. ಬೆಂಗಳೂರಿನಿಂದ, ಮೈಸೂರು ವರೆಗೂ ಪಾದಯಾತ್ರೆ ಹಮ್ಮಿಕೊಂಡಿದ್ದೆವು. ಬಿಜೆಪಿ ಜೆಡಿಎಸ್ ಜತೆ ಸೇರಿ ಯಶಸ್ವಿಯಾಗಿ ಪಾದಯಾತ್ರೆ ಮಾಡಿದೆವು ಎಂದು ಬಿ.ವೈ.ವಿಜಯೇಂದ್ರ ವಿವರಿಸಿದರು.
ನಿರಂತರ ಹೋರಾಟದ ಪರಿಣಾಮ ರಾಜ್ಯಪಾಲರಿಗೆ ಅನೇಕರು ಖಾಸಗಿ ದೂರು ಸಲ್ಲಿಸಿದರು. ಮುಡಾ ದೂರುಗಳ ಬಗ್ಗೆ ಕಾನೂನು ತಜ್ಞರ ಜತೆಗೆ ಚರ್ಚೆ, ಸಿಎಂ ಸಿದ್ದರಾಮಯ್ಯ ಸಮಜಾಯಿಷಿ ಪಡೆದ ರಾಜ್ಯಪಾಲರು ತಮ್ಮ ವಿವೇಚನೆ ಬಳಸಿ ಸಿಎಂ ವಿರುದ್ಧ ತನಿಖೆಗೆ ಅನುಮತಿ ನೀಡಿದರು.
ಈ ತೀರ್ಮಾನದ ಸಿಎಂ ಸಿದ್ದರಾಮಯ್ಯ ಆದಿಯಾಗಿ ಸಚಿವರು, ಕಾಂಗ್ರೆಸ್ ನಾಯಕರು ರಾಜಕೀಯ ಪ್ರೇರಿತ, ರಾಜಭವನದ ದುರ್ಬಳಕೆ ಎಂದು ಹೇಳಿ ತೇಜೋವಧೆಗೆ ಪ್ರಯತ್ನಿಸಿದರು. ಸಿಎಂ ಕುಟುಂಬಕ್ಕೆ ಲಾಭವಾಗಿದೆ ತನಿಖೆ ನಡೆಯಲಿ ಹೈಕೋರ್ಟ್ ಹೇಳಿದ್ದನ್ನು ವಿಜಯೇಂದ್ರ ಉಲ್ಲೇಖಿಸಿದರು.
ಪ್ರಕರಣವೊಂದರಲ್ಲಿ ಹೈಕೋರ್ಟ್ ನೀಡಿದ ತೀರ್ಪಿಗೆ ಯಡಿಯೂರಪ್ಪ ಓಗೊಟ್ಟು, ತಕ್ಷಣ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಕಾನೂನು ಹೋರಾಟ ನಡೆಸಿ ದೋಷಮುಕ್ತರಾಗಿ ಮತ್ತೆ ಮುಖ್ಯಮಂತ್ರಿಯಾದರು. ಇದೇ ರೀತಿ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡಿ, ಕಾನೂನು ಹೋರಾಟ ನಡೆಸಲಿ ಎಂದು ವಿಜಯೇಂದ್ರ ಒತ್ತಾಯಿಸಿದರು.
ಒಂದೆರಡು ತಿಂಗಳ ಕಾಲಾವಕಾಶದ ಪ್ರಶ್ನೆಯಲ್ಲ. ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿ, ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ. ವಾಲ್ಮೀಕಿ ನಿಗಮದಲ್ಲಿ ಹಗರಣವೇ ನಡೆದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ನಂತರ ಸದನದಲ್ಲಿ ಅವ್ಯವಹಾರ ಆಗಿದ್ದನ್ನು ಒಪ್ಪಿಕೊಂಡರು ಎಂದರು.
ಸಾಂವಿಧಾನಿಕ ಹುದ್ದೆಯಾದ ರಾಜ್ಯಪಾಲರನ್ನು ಅಪಮಾನಿಸಿದ ಕಾಂಗ್ರೆಸ್ ನಾಯಕರು ಕೂಡಲೇ ನಾಡಿನ ಜನರ ಕ್ಷಮೆಯಾಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದರು.
ಮುಡಾ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪು, ಭ್ರಷ್ಟಾಚಾರದ ವಿರುದ್ಧ ಬಿಜೆಪಿ ನಡೆಸಿದ ಹೋರಾಟಕ್ಕೆ ಲಭಿಸಿದ ಜಯವಾಗಿದೆ. ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಮುಂದಿನ ಕಾನೂನು ಹೋರಾಟ ನಡೆಸಲಿ ಎಂದರು.