ಕ್ರೀಡಾಪಟುಗಳು ರಾಜ್ಯಕ್ಕೆ ಕೀರ್ತಿ ತರಲಿ: ಆಯನೂರು

sports
ಸರ್ಕಾರಿ ನೌಕರರ ಸಂಘದ ರಾಜ್ಯ ಮಟ್ಟದ ಕ್ರೀಡಾಕೂಟದ ವಿಜೇತರಿಗೆ ಸಮಾರೋಪದಲ್ಲಿ ಬಹುಮಾನ ವಿತರಿಸಲಾಯಿತು. ಆಯನೂರು ಮಂಜುನಾಥ್, ಕೆ.ಬಿ.ಪ್ರಸನ್ನಕುಮಾರ್, ಸಿ.ಎಸ್.ಷಡಾಕ್ಷರಿ, ಎನ್.ಗೋಪಿನಾಥ್, ಎಸ್.ಪಿ.ದಿನೇಶ್, ಎಚ್.ಸಿ.ಯೋಗೇಶ್ ಮುಂತಾದವರಿದ್ದರು.
Published on

ಶಿವಮೊಗ್ಗ: ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವವರು ಅಲ್ಲಿಯೂ ವಿಜೇತರಾಗಿ ರಾಜ್ಯಕ್ಕೆ ಕೀರ್ತಿ ತರುವಂತಾಗಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್ ಆಶಿಸಿದರು.

ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದ ಸಮಾರೋಪದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಮಲೆನಾಡು ಆತಿಥ್ಯಕ್ಕೆ ಹೆಸರುವಾಸಿ. ಇಲ್ಲಿ ನಡೆದ ಕ್ರೀಡಾಕೂಟಕ್ಕೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರುವ ನೌಕರ ಕ್ರೀಡಾಪಟುಗಳು ಶಿವಮೊಗ್ಗದಲ್ಲಿ ಕಳೆದ ಅಲ್ಪ ಸಮಯ, ಇಲ್ಲಿನ ಆತಿಥ್ಯವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ನೌಕರರು ಜವಾಬ್ದಾರಿ ಅರಿತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಸರ್ಕಾರದ ಗೌರವ ಹೆಚ್ಚುತ್ತದೆ. ಸರ್ಕಾರದ ಬೆನ್ನೆಲುಬಾಗಿರುವ ನೌಕರರಿಂದಲೇ ಸರ್ಕಾರದ ಜನಪರ ಯೋಜನೆಗಳು ಜನಸಾಮಾನ್ಯರಿಗೆ ತಲುಪುತ್ತಿವೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಈ ಹಿಂದೆ ಮೂರ‌್ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುತ್ತಿದ್ದ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಕೆಲವು ವರ್ಷಗಳಿಂದ ಪ್ರತಿವರ್ಷ ವ್ಯವಸ್ಥಿತವಾಗಿ ಆಯೋಜಿಸಲಾಗುತ್ತಿದೆ. ಈ ಬಾರಿ ಶಿವಮೊಗ್ಗದಲ್ಲಿ ಆಯೋಜಿಸಿದ್ದ ಕ್ರೀಡಾಕೂಟ ವಿಶಿಷ್ಟವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರಚನಾತ್ಮಕವಾಗಿ ಕ್ರೀಡಾಕೂಟವನ್ನು ಆಯೋಜಿಸಲು ಗಮನಹರಿಸಲಾಗುವುದು ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ನಗರ ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಎನ್.ಗೋಪಿನಾಥ್, ಪದವೀಧರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net