ಕಲೆ, ಕೌಶಲ್ಯಗಳು ಜೀವಂತ ಸಂಸ್ಕೃತಿಯ ಭಾಗವಾಗಲಿ

ಬಾಗಲಕೋಟೆ ತಾಲೂಕಿನ ಬೆಣ್ಣೂರ ಗ್ರಾಮದಲ್ಲಿ ಭಾನುವಾರ ವಿಶ್ವಕರ್ಮ ಪ್ರಭುವಿನ ಭಾವಚಿತ್ರ ಮೆರವಣಿಗೆ ನಡೆಯಿತು.
ಬಾಗಲಕೋಟೆ ತಾಲೂಕಿನ ಬೆಣ್ಣೂರ ಗ್ರಾಮದಲ್ಲಿ ಭಾನುವಾರ ವಿಶ್ವಕರ್ಮ ಪ್ರಭುವಿನ ಭಾವಚಿತ್ರ ಮೆರವಣಿಗೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಜಂಟಿ ಕಾರ್ಯದರ್ಶಿ ಕೆ.ಆರ್. ಬಡಿಗೇರ ಅಭಿಮತ
  • ಬೆಣ್ಣೂರು ಗ್ರಾಮದಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ
  • ತತ್ವ ಸಂಸ್ಕೃತಿಯಿಂದ ವಸ್ತು ಸಂಸ್ಕೃತಿಯತ್ತ ಆಕರ್ಷಿತರಾಗಿದ್ದೇವೆ.
ಬಾಗಲಕೋಟೆ: ನಮ್ಮ ನಡುವೆ ಇರುವ ಸಾಂಪ್ರದಾಯಕ ಕಲೆ, ಕಸುಬು, ಭಾಷೆ ಹಾಗೂ ಕೌಶಲ್ಯಗಳು ಜೀವಂತ ಸಂಸ್ಕೃತಿಯ ಭಾಗವಾಗಬೇಕಿವೆ ಎಂದು ಕರ್ನಾಟಕ ಸರ್ಕಾರದ ನಿವೃತ್ತ ಜಂಟಿ ಕಾರ್ಯದರ್ಶಿ ಕೆ.ಆರ್. ಬಡಿಗೇರ ಹೇಳಿದರು.
ತಾಲೂಕಿನ ಬೆಣ್ಣೂರ ಗ್ರಾಮದಲ್ಲಿ ಭಾನುವಾರ ವಿಶ್ವಕರ್ಮ ಸಮಾಜ ಬೆಣ್ಣೂರು ಹಾಗೂ ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಮತ್ತು ಸಂಶೋಧಕರ ವೇದಿಕೆ, ಕಮಲಾಪೂರ ಇವರ ಸಹಯೋಗದಲ್ಲಿ ದ್ಯಾಮವ್ವನ ಗುಡಿ ಆವರಣದಲ್ಲಿ ನಡೆದ ಪ್ರಥಮ ವಿಶ್ವಕರ್ಮ ಪೂಜಾ ಮಹೋತ್ಸವ ಹಾಗೂ ಡಾ. ವೀರೇಶ ಬಡಿಗೇರ ಅವರು ‘ಬಡಿಗ ವೃತ್ತಿ : ವೈಜ್ಞಾನಿಕ ಚಿಂತನೆ’ ಮತ್ತು ‘ತಿಂತಣಿ ಮೌನೇಶ್ವರ ವಚನ ಪುಷ್ಪಾಂಜಲಿ’ ಪುಸ್ತಕಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಸಂದರ್ಭದಲ್ಲಿ ನಾವು ತತ್ವ ಸಂಸ್ಕೃತಿಯಿಂದ ವಸ್ತು ಸಂಸ್ಕೃತಿಯತ್ತ ಆಕರ್ಷಿತರಾಗಿದ್ದೇವೆ. ಹೊರಗಿನ ಜೀವನ, ತತ್ವ ಮತ್ತು ಸಿದ್ಧ ವಸ್ತುಗಳಿಗೆ ಬಾಯಿ ತೆರೆದುಕೊಂಡು ಭಿಕ್ಷುಕ ಪ್ರವೃತ್ತಿ ನಮ್ಮದಾಗುತ್ತಿದೆ. ಆದರೆ, ನಮ್ಮ ಕಲೆ ಮತ್ತು ಕಸುಬುಗಳು ದುಡಿತ, ಶ್ರಮ, ಸ್ವಾಭಿಮಾನ ಹಾಗೂ ತನ್ನದೇ ಆದ ಭಾಷಾ ಕೌಶಲ್ಯಗಳನ್ನು ಹೊಂದಿದ್ದವು. ಅನ್ಯದರ ಅನುಕರಣೆ ಮತ್ತು ನಕಲಾಗುತ್ತಿರುವ ನಮ್ಮ ಜೀವನಧರ್ಮವೇ ಅಸಲಿಯಾಗಿಲ್ಲದಿರುವಾಗ ನಮ್ಮ ಉತ್ಪನ್ನಗಳಾದ ಕಲೆ ಮತ್ತು ಕಸುಬುಗಳು ಹೇಗೆ ಅಸಲಿಯಾಗಿ ಉಳಿಯಲು ಸಾಧ್ಯ? ನಮ್ಮ ಬದುಕಿಗೊಂದು ಸಂಸ್ಕೃತಿ ವಿಸ್ತಾರವಿದ್ದರೆ ನಮ್ಮ ಕಲೆಗಳಿಗೂ ಅದು ವಿಸ್ತಾರವಾಗುತ್ತಿತ್ತು ಎಂದರು.
ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ. ವೀರೇಶ ಬಡಿಗೇರ ಅವರ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಸಮಾಜದ ಹಿರಿಯ ಗಂಗಣ್ಣ ಬಡಿಗೇರ, ಬಡಿಗ ಸಮುದಾಯ ಮತ್ತು ಅದರ ಪಾರಂಪರಿಕ ತಿಳಿವಳಿಕೆಯನ್ನು ಕೇವಲ ಜಾತಿ, ಸಮಾಜ, ಶಾಸೀಯ ಅನುಕಂಪದ ನೆಲೆಗಳಿಂದ ನೋಡದೆ ಉಪೇಕ್ಷೆಗೆ ಒಳಗಾದ ಆ ಸಮುದಾಯದ ಅರಿವಿನ ನೆಲೆಗಳಿಂದ ನೋಡಬೇಕಾದ ಅವಶ್ಯಕತೆಯಿದೆ ಎಂದು ತಿಳಿಸಿದರು.
ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತ ಅನಿತಾ ಆಚಾರ್ ಮಾತನಾಡಿ, ಶೈಕ್ಷಣಿಕ ರಂಗದಲ್ಲಿ ಸಾಧನೆಗೈದ ಸಾಕಷ್ಟು ಪ್ರತಿಭೆಗಳು ಸಮುದಾಯದಲ್ಲಿದ್ದಾರೆ. ಶಿಕ್ಷಣದ ಮೂಲಕ ಮಹಿಳೆಯರು ಸಮಾಜದ ಮುನ್ನೆಲೆಗೆ ಬರಬೇಕು ಎಂದು ಹೇಳಿದರು.
ಪಿಎಂ ಯೋಜನೆಯ ಸಂಚಾಲಕ ಪ್ರಶಾಂತ ಮಾತನಾಡಿ, ಸಮಾಜದ ಯುವಕರು ಸರ್ಕಾರಿ ಸೌಲಭ್ಯವನ್ನು ಪಡೆಯುವ ವಿಧಾನ ಅರಿತುಕೊಂಡು ಉದ್ಯೋಗ ಮಾಡುವ ಮೂಲಕ ಸಮಾಜವನ್ನು ಆರ್ಥಿಕವಾಗಿ ಬಲಿಷ್ಠಗೊಳಿಸುವ ಸಂಕಲ್ಪವನ್ನು ಮಾಡಬೇಕು ಎಂದರು.
ಪೂಜಾ ಮಹೋತ್ಸವ ಸಮಿತಿ ನಿರ್ದೇಶಕ ಡಾ. ವೀರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರಸಂಗಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯಕ್ಷ ಪಿ.ಬಿ. ಬಡಿಗೇರ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಕರ್ನಾಟಕ ರಾಜ್ಯ ವಿಶ್ವ ಬ್ರಾಹ್ಮಣ ಮಠಾಧಿಪತಿಗಳು ಹಾಗೂ ಪೀಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಸ್ವಾಮೀಜಿ ಹಾಗೂ ಮುರನಾಳ ಮಳೆರಾಜೇಂದ್ರಸ್ವಾಮಿ ಮಠದ ಜಗನ್ನಾಥ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗಲಿಂಗಪ್ಪ ಗಂಗೂರು ಸೇರಿ ಅನೇಕ ಸಾಧಕರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ಬಾಗಲಕೋಟೆ ತಹಸೀಲ್ದಾರ ವಾಸುದೇವಸ್ವಾಮಿ, ಜಿಲ್ಲಾ ವಿಶ್ವಕರ್ಮ ಸಮಾಜ ಅಧ್ಯಕ್ಷ ಅರವಿಂದ ಪತ್ತಾರ, ಬಾಗಲಕೋಟೆ ತಾಲೂಕು ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಅಗಳತಕಟ್ಟಿ, ಇಲಕಲ್ಲ ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ವೀರಭದ್ರಪ್ಪ ಹಿಪ್ಪರಗಿ, ವಿದ್ಯಾಗಿರಿ ಕಾಳಿಕಾ ದೇವಸ್ಥಾನ ಅಧ್ಯಕ್ಷ ವಂತರಾವ್ ಕಮ್ಮಾರ, ಬೀಳಗಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ನಾಗೂ ಟಂಕಸಾಲಿ ಮತ್ತಿತರರು ಇದ್ದರು.
ಇದಕ್ಕೂ ಮುನ್ನ ಪ್ರಥಮ ಪೂಜಾ ಮಹೋತ್ಸವ ಅಂಗವಾಗಿ ವಿಶ್ವಕರ್ಮ ಪ್ರಭುವಿನ ಭಾವಚಿತ್ರ ಮೆರವಣಿಗೆ ಅದ್ದೂರಿಯಿಂದ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net