ಕರೊನಾ ಸಮರದಲ್ಲಿ ಎಲ್ಲ ಸರ್ಕಾರಿ ನೌಕರರು ಕೈಜೋಡಿಸಲಿ! ತುರ್ತು ಸೇವೆಗಳಲ್ಲಿ ಕಾಡುತ್ತಿದೆ ಸಿಬ್ಬಂದಿ ಕೊರತೆ, ಮತ್ತೆ 3.40 ಲಕ್ಷ ಉದ್ಯೋಗಿಗಳು ಭಾಗಿಯಾದರೆ ಹೊರೆ ಕೊಂಚ ಇಳಿಕೆ

page 1 1
Published on

ಬೆಂಗಳೂರು: ಮಹಾಮಾರಿ ಕರೊನಾ ವಿರುದ್ಧ ಸೆಣಸುತ್ತಿರುವ ರಾಜ್ಯದ ಅಂದಾಜು 2 ಲಕ್ಷ ಸರ್ಕಾರಿ ನೌಕರರ ಜತೆಗೆ ಇನ್ನೂ 3.40 ಲಕ್ಷ ಸಿಬ್ಬಂದಿಯನ್ನು ಬಳಸಿಕೊಳ್ಳುವ ಮೂಲಕ ತುರ್ತು ಸೇವೆಗಳಲ್ಲಿ ಕಾಡುತ್ತಿರುವ ಸಿಬ್ಬಂದಿ ಕೊರತೆ ಸರಿದೂಗಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಗೂ ಸಲಹೆಗಳು ಬರಲಾರಂಭಿಸಿವೆ.

ರಾಜ್ಯದ ಒಟ್ಟು 5.40 ಲಕ್ಷ ಸರ್ಕಾರಿ ನೌಕರರ ಪೈಕಿ ಮೇ 24ರಿಂದ 2 ಲಕ್ಷ ನೌಕರರು ಕರೊನಾ ವಿರುದ್ಧದ ಸಮರದಲ್ಲಿ ಕೈಜೋಡಿಸಿ ದುಡಿಯುತ್ತಿದ್ದಾರೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲೇ ಉಳಿದಿರುವ 3.40 ಲಕ್ಷ ನೌಕರರನ್ನೂ ತುರ್ತು ಸೇವೆಗಳಿಗೆ ಬಳಸಿಕೊಳ್ಳಬೇಕೆಂಬ ವಿಚಾರ ಚರ್ಚೆಯಾಗುತ್ತಿದೆ.

15 ಇಲಾಖೆ ಸಕ್ರಿಯ: ಆರೋಗ್ಯ, ವೈದ್ಯಕೀಯ ಶಿಕ್ಷಣ, ಒಳಾಡಳಿತ, ಕಂದಾಯ, ಗ್ರಾಮೀಣಾಭಿವೃದ್ದಿ, ನಗರಾಭಿವೃದ್ಧಿ, ಆಹಾರ, ವಾರ್ತಾ ಹಾಗೂ ಇಂಧನ ಸೇರಿ 15 ಇಲಾಖೆಗಳ ಸಿಬ್ಬಂದಿ ಜೀವವನ್ನೇ ಪಣಕ್ಕಿಟ್ಟು ಮಾ.23ರಿಂದ ಕೆಲಸ ಮಾಡುತ್ತಿದ್ದಾರೆ. ರೇಷ್ಮೆ, ಸಾರಿಗೆ, ಹಿಂದುಳಿದ ವರ್ಗಗಳ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಲೋಕೋಪಯೋಗಿ, ಪ್ರವಾಸೋದ್ಯಮ, ಶಿಕ್ಷಣ ಮತ್ತಿತರರ ಇಲಾಖೆಯ ಲಕ್ಷಾಂತರ ಸಿಬ್ಬಂದಿ ಕರೊನಾ ಕೆಲಸದಿಂದ ಮುಕ್ತರಾಗಿ ಮನೆಯಲ್ಲೇ ಉಳಿದಿದ್ದಾರೆ. ಏ.14ರಿಂದ ಶೇ.33 ಸಿಬ್ಬಂದಿ ಕೆಲಸಕ್ಕೆ ಹಾಜರಾಗಬೇಕೆಂದು ಸರ್ಕಾರ ಆದೇಶಿಸಿದ ಬಳಿಕ ಕೆಲ ನೌಕರರು ಕಚೇರಿಗೆ ಬರುತ್ತಿದ್ದಾರಾದರೂ ಪ್ರಮುಖ ಕೆಲಸ ಹಾಗೂ ಕಡತಗಳ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

ಇರುವವರು ಹೈರಾಣ: ಆರೋಗ್ಯ ಇಲಾಖೆಯ ವೈದ್ಯರು ನರ್ಸ್, ಇತರ ವೈದ್ಯಕೀಯ ಸಿಬ್ಬಂದಿ ರಜೆ ಪಡೆಯದೆಯೇ ತಿಂಗಳುಗಳಿಂದ ಸೇವೆಯಲ್ಲಿ ನಿರತರಾಗಿದ್ದಾರೆ. ಕುಟುಂಬದವರನ್ನು ಬಿಟ್ಟು ವಾರಗಟ್ಟಲೆ ಕಾಲ ಆಸ್ಪತ್ರೆಯಲ್ಲಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ಕರೊನಾ ಆತಂಕದ ನಡುವೆಯೂ ಕೆಲಸ ಮಾಡುತ್ತಿರುವ ಪೊಲೀಸರು ಮನೆಗೆ ತೆರಳಿದರೂ ಪತ್ನಿ ಹಾಗೂ ಮಕ್ಕಳನ್ನು ಮಾತನಾಡಿಸುವುದಕ್ಕೂ ಆಗುತ್ತಿಲ್ಲ. ಹೀಗಾಗಿ, ಆರೋಗ್ಯ ಹಾಗೂ ಪೊಲೀಸ್ ಸಿಬ್ಬಂದಿ ಕೈಯಲ್ಲಿ ಜೀವ ಹಿಡಿದುಕೊಂಡು ಕೆಲಸ ಮಾಡುತ್ತಿದ್ದಾರೆ.

ನಾಗಮಂಗಲ ಮಾದರಿ: ನಾಗಮಂಗಲದಲ್ಲಿ ಎಲ್ಲ ಸರ್ಕಾರಿ ಉದ್ಯೋಗಿಗಳನ್ನು ಕರೊನಾ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳುವ ಮೂಲಕ ಮಂಡ್ಯ ಜಿಲ್ಲೆ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ. ಇದೇ ರೀತಿ ರಾಜ್ಯ ಸರ್ಕಾರವೇ ಎಲ್ಲ ಉದ್ಯೋಗಿಗಳನ್ನು ಸೇವೆಗೆ ಬಳಸಿಕೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಎಲ್ಲೆಲ್ಲಿ ಅತ್ಯಗತ್ಯ: ಚೆಕ್ ಪೋಸ್ಟ್​ಗಳಲ್ಲಿ ವಾಹನ ತಪಾಸಣೆ ಸೇರಿ ತುರ್ತು ಸೇವೆಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದೆ. ಹೀಗಾಗಿ ಕಚೇರಿಗಳಲ್ಲಿ ಕೆಲಸವೇ ಇಲ್ಲದಂತಹ ನೌಕರರಿಗೆ ಅಗತ್ಯ ತರಬೇತಿ ನೀಡಿ ತುರ್ತು ಸೇವೆಗೆ ಬಳಸಿಕೊಂಡಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇತರ ನೌಕರರಿಗೂ ಒತ್ತಡ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತಿದೆ.

ಶಿಕ್ಷಣ ಇಲಾಖೆಯಲ್ಲೇ ಹೆಚ್ಚು: ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ವ್ಯಾಪಿಗೆ ಒಳಪಡುವ ಶಿಕ್ಷಣ ಇಲಾಖೆಯಲ್ಲಿ ಆಂದಾಜು 3 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇದೀಗ ಬೇಸಿಗೆ ರಜೆ ಇರುವುದರಿಂದ ಎಲ್ಲ ಶಿಕ್ಷಕರು ಮನೆಯಲ್ಲೇ ಇದ್ದಾರೆ. ಏ.14ರ ನಂತರ ಶಿಕ್ಷಣ ಇಲಾಖೆಗೆ ಶೇ.33 ಅಧಿಕಾರಿಗಳು ಬಂದು ಕೆಲಸ ಮಾಡುತ್ತಿದ್ದಾರೆ. ಆದರೆ, ಯಾವುದೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಡತಗಳು ಬಾಕಿ ಉಳಿದಿವೆ. ಹೀಗಾಗಿ ಅಂಥವರಿಗೆ ತರಬೇತಿ ನೀಡಿ ತುರ್ತು ಸೇವೆಗಳಿಗೆ ಬಳಸಿಕೊಳ್ಳಬಹುದು ಎಂಬುದು ಕೆಲವರ ಸಲಹೆ.

| ಬೇಲೂರು ಹರೀಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net