

ಇಂದಿನಿಂದ ನವರಾತ್ರಿ ಪರ್ವ ಆರಂಭವಾಗಿದೆ. ಮುಂದೆ ಸಾಲು ಸಾಲು ಹಬ್ಬ, ಉತ್ಸವಗಳನ್ನು ಬರಮಾಡಿಕೊಳ್ಳಲು ರಾಜ್ಯ, ದೇಶ ಸಜ್ಜಾಗಿದೆ. ಪರಿಸ್ಥಿತಿ ಸಾಮಾನ್ಯವಾಗಿದ್ದರೆ ಹಬ್ಬದ ಸಂಭ್ರಮ ಮತ್ತಷ್ಟು ಗರಿಗೆದರಿರುತ್ತಿತ್ತು. ಆದರೆ, ಕರೊನಾ ಸೋಂಕಿನ ಹಾವಳಿ ಅದಕ್ಕೆಲ್ಲ ತಡೆಯೊಡ್ಡಿದೆ. ಲಾಕ್ಡೌನ್ ತೆರವುಗೊಂಡಿರುವುದರಿಂದ ಮನೆಗಳಿಗೆ ಸೀಮಿತವಾಗಿ, ಸಾಮೂಹಿಕವಾಗಿ ಸರ್ಕಾರದ ನಿಯಮಗಳ ಅನುಸಾರ ಹಬ್ಬಗಳನ್ನು ಆಚರಿಸಲು ಸಾಧ್ಯವಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯದ ಗಾಢ ಹಿನ್ನೆಲೆಯನ್ನು ಬಿಂಬಿಸುವ ಪರ್ವಗಳ ಆಚರಣೆಯನ್ನು ಸಂಪೂರ್ಣವಾಗಿ ಕೈಬಿಡಲಂತೂ ಸಾಧ್ಯವಿಲ್ಲ. ಆದರೆ, ಪರ್ವಗಳ ಆಚರಣೆ ಯಾವುದೇ ಕಾರಣಕ್ಕೂ ಕರೊನಾ ಸೋಂಕಿನ ಪ್ರಸರಣವನ್ನು ಹೆಚ್ಚಿಸುವಂತಾಗಬಾರದು ಎಂಬುದನ್ನು ನೆನಪಿನಲ್ಲಿ ಇರಿಸಿಕೊಂಡೇ ಮುಂದಡಿ ಇಡಬೇಕು. ಮಹಾರಾಷ್ಟ್ರ, ಕರ್ನಾಟಕ, ಕೇರಳದಲ್ಲಂತೂ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇಂಥ ಹೊತ್ತಲ್ಲಿ ಸ್ವಲ್ಪ ಮೈಮರೆತರೂ ಅಪಾಯವನ್ನು ನಾವೇ ಆಹ್ವಾನಿಸಿದಂತೆ.
ಆರೋಗ್ಯ ತಜ್ಞರು ಮತ್ತು ಸರ್ಕಾರದ ಎಚ್ಚರಿಕೆಯನ್ನು ಈ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸಬೇಕಿದೆ. ಹಬ್ಬಗಳು ಹಾಗೂ ರಜಾ ಹಿನ್ನೆಲೆಯಲ್ಲಿ ಭಾರತದಲ್ಲಿ ಸೋಂಕು ಪ್ರಕರಣಗಳು ಮುಂದಿನ 15 ದಿನಗಳಲ್ಲಿ ಭಾರಿ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಸೋಂಕು ಪ್ರಕರಣಗಳಲ್ಲಿ ಭಾರತ ಜಾಗತಿಕವಾಗಿ ಈಗಾಗಲೇ ಎರಡನೇ ಸ್ಥಾನದಲ್ಲಿದೆ. ಆದರೆ, ಅಮೆರಿಕವನ್ನು ಹಿಂದಿಕ್ಕಿ ಭಾರತ ಅಗ್ರಸ್ಥಾನಕ್ಕೇರುವ ಸಾಧ್ಯತೆ ಇದೆ. ಹಬ್ಬಗಳ ಆಚರಣೆ ಒಂದೆಡೆಯಾದರೆ, ಕೆಲವೆಡೆ ಚುನಾವಣೆಯ ಭರಾಟೆ. ಬಿಹಾರದಲ್ಲಿ ಈಗಾಗಲೇ ಚುನಾವಣಾ ರ್ಯಾಲಿಗಳು ಆರಂಭಗೊಂಡಿದ್ದು, ಚುನಾವಣೆ ಹೊತ್ತಲ್ಲಿ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇದೆ. ಕರ್ನಾಟಕದಲ್ಲೂ ಕೆಲವೆಡೆ ಉಪಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆ ನಡೆಯುತ್ತಿವೆ. ಇಲ್ಲಿ ಸೂಕ್ಷ್ಮ ಮತ್ತು ಸಂದಿಗ್ಧತೆ ಎರಡನ್ನೂ ಮನಗಾಣಬೇಕು. ಕರೊನಾ ಕಾರಣದಿಂದ ದೀರ್ಘಾವಧಿ ಲಾಕ್ಡೌನ್ ಮಾಡಲು ಸಾಧ್ಯವಿಲ್ಲ ಮತ್ತು ಎಲ್ಲ ಚಟುವಟಿಕೆಗಳನ್ನು ಸ್ತಬ್ಧಗೊಳಿಸಲು ಆಗುವುದಿಲ್ಲ ಎಂಬ ಕಾರಣಕ್ಕಾಗಿಯೇ ‘ಜೀವ-ಜೀವನ’ ಎರಡರ ಹಿತವನ್ನೂ ಪರಿಗಣಿಸಿಯೇ, ಬಹುತೇಕ ಎಲ್ಲ ವಲಯಗಳ ಚಟುವಟಿಕೆ ಪುನರಾರಂಭ ಮಾಡಲಾಗಿದೆ. ಪ್ರಸ್ತುತ 17 ದೇಶಗಳಿಗೆ ಭಾರತೀಯರು ಪ್ರಯಾಣಿಸಲು ಸರ್ಕಾರ ಅನುಮತಿ ನೀಡಿದೆ. ಹಂತಹಂತವಾಗಿ ಎಲ್ಲವನ್ನೂ ಹಳಿಗೆ ಮರಳಿ ತರುವುದು ಅನಿವಾರ್ಯ ಕೂಡ ಹೌದು.
ಹಬ್ಬಗಳ ಸಾಂಪ್ರದಾಯಿಕ ಆಚರಣೆಗಳಿಗೆ ತೊಡಕಾಗದಂತೆ ನಿಯಮಗಳನ್ನು ರೂಪಿಸಲಾಗಿದೆ. ಆ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಆಗಬೇಕು, ಸುರಕ್ಷಿತ ಅಂತರ, ಮಾಸ್ಕ್ ಬಳಕೆ, ಸ್ವಚ್ಛತೆ ಸೇರಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಉತ್ಸಾಹದ ಭರದಲ್ಲಿ ಕರೊನಾವನ್ನು ಮತ್ತಷ್ಟು ಹಬ್ಬಿಸಬಾರದು. ಅಷ್ಟಕ್ಕೂ, ನಮ್ಮ ನಮ್ಮ ಮನೆಗಳಲ್ಲಿ ಹಬ್ಬ ಆಚರಿಸಲು ಯಾವುದೇ ಅಡ್ಡಿ ಇಲ್ಲ. ದೇವಿ-ದೇವತೆಯರನ್ನು ಅಂತರಂಗದಲ್ಲಿ ಪ್ರತಿಷ್ಠಾಪಿಸಿ, ಶ್ರದ್ಧೆಯಿಂದ ಪೂಜಿಸುವ, ಆರಾಧಿಸುವ ಸಂಸ್ಕೃತಿಯೇ ನಮ್ಮಲ್ಲಿ ಜನಜನಿತವಾಗಿದೆ ಎಂಬುದನ್ನು ಅರ್ಥ ಮಾಡಿಕೊಂಡು ಭಕ್ತಿಪ್ರಧಾನ-ಭಾವಪ್ರಧಾನವಾಗಿ ಹಬ್ಬಗಳನ್ನು ಆಚರಿಸೋಣ.