

ಶಿವಮೊಗ್ಗ: ರಾಜ್ಯದ 130 ತಾಲೂಕುಗಳನ್ನು ಬರಪೀಡತವೆಂದು ಘೋಷಣೆ ಮಾಡಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಒತ್ತಾಯಿಸಿದರು.
ಆಗಸ್ಟ್ ಕೊನೆ ವಾರ ಬಂದರೂ ವರುಣನ ಕೃಪೆ ಇಲ್ಲದಂತಾಗಿದೆ. ಸದ್ಯ ಮಳೆ ಬಂದರೂ ಶೇ.25ರಷ್ಟು ಬೆಳೆ ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಹಾಗಾಗಿ ರೈತರು ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕುತ್ತಿದ್ದು ಬರಗಾಲ ಪರಿಹಾರವಾಗಿ ಪ್ರತಿ ಎಕರೆಗೆ 25 ಸಾವಿರ ರೂ. ನೀಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶೇ.60ಕ್ಕಿಂತ ಹೆಚ್ಚು ಬೆಳೆ ನಷ್ಟವಾದರೆ ಮಾತ್ರ ಕೇಂದ್ರ ಸರ್ಕಾರ ಬರ ಎಂದು ಘೋಷಣೆ ಮಾಡಿಲಿದೆ. ಹಾಗಾಗಿ ಬರ ಘೋಷಣೆ ವಿಷಯದಲ್ಲಿ ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸಬಾರದು. ತಕ್ಷಣವೇ ಕಂದಾಯ ಇಲಾಖೆ ಮತ್ತು ಕೃಷಿ ಅಧಿಕಾರಿಗಳ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ವಿತರಿಸುವ ಕೆಲಸ ಆಗಬೇಕು ಎಂದರು.
ಕಂದಾಯ ಸಚಿವ ಕೃಷ್ಣಭೈರೇಗೌಡ ಅವರೇ 120 ತಾಲೂಕುಗಳಲ್ಲಿ ಬರಗಾಲದ ಛಾಯೆ ಇದೆ ಎಂದು ತಿಳಿಸಿದ್ದಾರೆ. ಪ್ರತಿ ತಾಲೂಕುಗಳಲ್ಲೂ ಬರಪೀಡಿತವೆಂದು ಘೋಷಿಸುವಂತೆ ನಿರಂತರ ಪ್ರತಿಭಟನೆ ನಡೆಸಲಾಗುತ್ತಿದೆ. ಇದೀಗ ಬರದ ಛಾಯೆ 130 ತಾಲೂಕುಗಳಿಗೆ ವಿಸ್ತರಣೆಯಾಗಿದ್ದು ಈ ಎಲ್ಲ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ಪರಿಹಾರ ಬಿಡುಗಡೆ ಮಾಡಬೇಕು. ಜತೆಗೆ ಫಸಲ್ ವಿಮಾ ಮಾಡಿಸಿದ ರೈತರಿಗೆ ಮಧ್ಯಂತರ ಪರಿಹಾರವನ್ನು ಕೊಡಬೇಕು ಮತ್ತು ಜನ-ಜಾನುವಾರುಗಳಿಗೆ ಕುಡಿಯುವ ನೀರನ್ನು ಪೂರೈಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಉಪಾಧ್ಯಕ್ಷರಾದ ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಕಾರ್ಯಾಧ್ಯಕ್ಷ ಕೆ.ರಾಘವೇಂದ್ರ, ಪಿ.ಡಿ. ಮಂಜಪ್ಪ ಸುದ್ದಿಗೋಷ್ಠಿಯಲ್ಲಿದ್ದರು.