

ನವದೆಹಲಿ: ಚುನಾವಣೆಯಲ್ಲಿ ಗೆಲುವಿಗೆ ಬಹುಮತ ಹೇಗೆ ಮುಖ್ಯವೋ ಅದೇರೀತಿ ಜನಪ್ರತಿನಿಧಿಯ ಆಯ್ಕೆ ಸಮರ್ಪಕವಾಗಿ ಆಗಬೇಕಿದ್ದರೆ ಶೇಕಡಾವಾರು ಮತದಾನ ಗರಿಷ್ಠ ಪ್ರಮಾಣದಲ್ಲಿ ಆಗಬೇಕಾದ್ದೂ ಅತ್ಯಗತ್ಯ. ಆದರೆ ದೇಶದ ರಾಜಧಾನಿಯಲ್ಲೇ ಮತದಾನ ಪ್ರಮಾಣ ಕಡಿಮೆ ಇರುವುದು ಚಿಂತಿಸುವಂತೆ ಮಾಡಿದೆ.
ದೇಶದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರೇ ಇಂಥದ್ದೊಂದು ವಿಷಯವನ್ನು ಪ್ರಸ್ತಾಪಿಸಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ದೆಹಲಿಯ ಬಖ್ತಾವರ್ಪುರ್ನಲ್ಲಿನ ಇಂಟೆಗ್ರೇಟೆಡ್ ಎಲೆಕ್ಷನ್ ಕಾಂಪ್ಲೆಕ್ಸ್ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಕಳೆದ ಚುನಾವಣೆಯಲ್ಲಿನ ಮತದಾನ ಕಡಿಮೆ ಇತ್ತು. ಇದು ದೇಶದ ರಾಜಧಾನಿ, ಸುಶಿಕ್ಷಿತ ಜನರು ಇಲ್ಲಿದ್ದಾರೆ. ಅದಾಗ್ಯೂ ಏಕೆ ಮತದಾನ ಕಡಿಮೆ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ದಕ್ಷಿಣ ದೆಹಲಿ ಅತಿ ಕಡಿಮೆ ಮತದಾನ ಕಂಡಿತ್ತು. ಆದರೆ ಅಸ್ಸಾಂ ಶೇ. 80ಕ್ಕೂ ಅಧಿಕ ಮತದಾನ ಕಂಡಿರುವಾಗ ದೆಹಲಿಯಲ್ಲಿ ಶೇ. 62.5 ಯಾಕೆ ಎಂದು ಬೇಸರ ವ್ಯಕ್ತಪಡಿಸಿರುವ ಅವರು, ಮತದಾನದ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇವಿಎಂ ಬಗ್ಗೆಯೂ ಮಾತನಾಡಿರುವ ಅವರು, ವಿದ್ಯುನ್ಮಾನ ಮತಯಂತ್ರಗಳು ಭಾರತದ ಹೆಮ್ಮೆ, ಸಿಂಗಲ್ ಚಿಪ್ ಪ್ರೋಗ್ರಾಂ ಹೊಂದಿರುವ ಅದನ್ನು ಟ್ಯಾಂಪರ್ ಅಥವಾ ಹ್ಯಾಕ್ ಮಾಡಲು ಸಾಧ್ಯವಿಲ್ಲ, ಅವು ಕರಾರುವಾಕ್ ಫಲಿತಾಂಶ ನೀಡುತ್ತವೆ ಎಂದು ಹೇಳಿದ್ದಾರೆ.