ದೇಶದಲ್ಲಿ 3 ತಿಂಗಳ ಬಳಿಕ ಕಡಿಮೆ ಕರೊನಾ ಪ್ರಕರಣಗಳು ಪತ್ತೆ: ಚೇತರಿಕೆ ಪ್ರಮಾಣ ಏರಿಕೆ

Corona
Published on

ನವದೆಹಲಿ: ಮಹಾಮಾರಿ ಕರೊನಾ ವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಕಡಿಮೆಯಾಗುತ್ತಿರುವುದು ದೇಶದ ಜನರಿಗೆ ಖುಷಿಯ ವಿಚಾರವಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 46,790 ಪ್ರಕರಣಗಳು ದಾಖಲಾಗಿದ್ದು, ಕಳೆದ ಮೂರು ತಿಂಗಳ ಬಳಿಕ ಕಂಡುಬಂದ ಕಡಿಮೆ ಪ್ರಮಾಣ ಇದಾಗಿದೆ.

ಕಳೆದ ಜುಲೈ ಅಂತ್ಯದಿಂದ ಈವರೆಗೆ ಕಂಡುಬಂದ ಅತಿ ಕಡಿಮೆ ಪ್ರಕರಣಗಳು ಇದಾಗಿದ್ದು, ಸದ್ಯ ದೇಶದಲ್ಲಿನ ಕೋವಿಡ್​ ಪ್ರಕರಣಗಳ ಸಂಖ್ಯೆ 75,97,063ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 587 ಮಂದಿ ಕರೊನಾಗೆ ಮೃತಪಟ್ಟಿದ್ದು, ಮೃತಪಟ್ಟವರ ಸಂಖ್ಯೆ 1,15,197ಕ್ಕೆ ಏರಿದೆ.

ದೇಶವೂ ಕರೊನಾ ವೈರಸ್​ ಶಿಖರವನ್ನು ದಾಟಿದೆ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದಾಗಿನಿಂದ ದೇಶದಲ್ಲಿ ಕೋವಿಡ್​ ಪ್ರಕರಣಗಳ ಕೆಳಮುಖ ಪ್ರವೃತ್ತಿ ಕಾಣತೊಡಗಿದೆ. ಸೆಪ್ಟೆಂಬರ್​ ಮಧ್ಯದಲ್ಲಿ ದಿನವೊಂದಕ್ಕೆ 90 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದವು. ಇನ್ನು ಜುಲೈ ಅಂತ್ಯದಿಂದ 50 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗತೊಡಗಿದವು. ಇದೀಗ ಕರೊನಾ ವೈರಸ್​ ಪ್ರಮಾಣ ಇಳಿಮುಖವಾಗಿದ್ದು, ಕಳೆದ ಮೂರು ತಿಂಗಳಲ್ಲಿ ಕಡಿಮೆ ಪ್ರಕರಣಗಳು ಇಂದು ವರದಿಯಾಗಿವೆ.

ಒಂದೇ ದಿನದಲ್ಲಿ 69, 720 ಮಂದಿ ಗುಣಮುಖರಾಗುವ ಮೂಲಕ ದೇಶದಲ್ಲಿ ಕರೊನಾ ಸಕ್ರೀಯ ಪ್ರಕರಣಗಳು 7.5 ಲಕ್ಷಕ್ಕೆ ಕುಸಿದಿದೆ. ಸುಮಾರು 67. 3 ಲಕ್ಷ ಮಂದಿ ಕರೊನಾ ವಿರುದ್ಧ ಹೋರಾಟದಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಭಾರತೀಯರ ಚೇತರಿಕೆ ಪ್ರಮಾಣ ಶೇ. 88.6 ರಷ್ಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net