

ಲಾಕ್ಡೌನ್ನಿಂದಾಗಿ ಬೆಂಗಳೂರಿನ ಪೌರಕಾರ್ವಿುಕರು, ತ್ಯಾಜ್ಯ ನಿರ್ವಹಣ ಘಟಕ ಹಾಗೂ ಭೂಭರ್ತಿಗಳ ಮೇಲಿನ ಭಾರ ತಗ್ಗಿದೆ.
ಕಳೆದ ತಿಂಗಳ ಹೋಲಿಕೆಯಲ್ಲಿ ಪ್ರತಿದಿನ ಬರೊಬ್ಬರಿ 1 ಸಾವಿರ ಟನ್ ತ್ಯಾಜ್ಯ ಸಂಗ್ರಹ ಕಡಿಮೆಯಾಗಿದ್ದು, ಪ್ರಮುಖವಾಗಿ ಹಸಿ ತ್ಯಾಜ್ಯ ಸಂಗ್ರಹದಲ್ಲಿ ಇಳಿಕೆ ಕಂಡುಬಂದಿದೆ. ಬಿಬಿಎಂಪಿಗೆ ಒಳಪಡುವ 800 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿದಿನ 3.5ರಿಂದ 4 ಸಾವಿರ ಟನ್ (ಟಿಪಿಡಿ) ತ್ಯಾಜ್ಯ ಸಂಗ್ರಹವಾಗುತ್ತದೆ. ತಿಂಗಳ ಸರಾಸರಿಯಲ್ಲಿ ಮೂರೂವರೆ ಸಾವಿರ ಟನ್ ಪ್ರತಿದಿನ ಮನೆಗಳಿಂದ ಸಂಗ್ರಹ ಸಾಗಿಸಲಾಗುತ್ತದೆ. ಸಗಟು ತ್ಯಾಜ್ಯ ಉತ್ಪಾದಕರಾದ ಹೋಟೆಲ್ಗಳು ಬಂದ್ ಆಗಿರುವುದು ಶೇ.23 ಹಸಿ ತ್ಯಾಜ್ಯ ಇಳಿಯಲು ಕಾರಣವಾಗಿದೆ.
ಪ್ರತಿದಿನ 3,070 ಟನ್ ತ್ಯಾಜ್ಯ: ಮನೆಗಳು ಹಾಗೂ ಉದ್ಯಮದಿಂದ ತ್ಯಾಜ್ಯವನ್ನು ಹಸಿ ಹಾಗೂ ಒಣ ಕಸವಾಗಿ ವಿಂಗಡಿಸಿ ನೀಡಲು ತಿಳಿಸಲಾಗಿದೆ. ಉದ್ಯಮಗಳು, ಅಪಾರ್ಟ್ವೆುಂಟ್ಗಳು ಸಾಕಷ್ಟು ಪಾಲನೆ ಮಾಡುತ್ತಿವೆಯಾದರೂ ವೈಯಕ್ತಿಕ ಮನೆಗಳಲ್ಲಿ ಬಹುತೇಕರು ಹಸಿ ಹಾಗೂ ಒಣ ಕಸವನ್ನು ಒಟ್ಟಿಗೆ ನೀಡುತ್ತಾರೆ. ಮೂಲದಲ್ಲೇ ಪ್ರತ್ಯೇಕಿಸಲಾದ ಹಸಿ ತ್ಯಾಜ್ಯವನ್ನು ಬಿಬಿಎಂಪಿಯ 7 ಸಂಸ್ಕರಣ ಘಟಕಗಳಿಗೆ ಕಳಿಸಿಕೊಡಲಾಗುತ್ತದೆ. ಅಲ್ಲಿ ಕಾಂಪೋಸ್ಟ್ ತಯಾರಿಸಿ ಮಾರಲಾಗುತ್ತದೆ. ಈ ಪ್ರಮಾಣ ಪ್ರತಿದಿನ 500-600 ಟನ್ ಇರುತ್ತದೆ. ಆದರೆ ಬೇರ್ಪಡಿಸಲಾಗದ ಹಸಿ ಹಾಗೂ ಒಣ ತ್ಯಾಜ್ಯವನ್ನು ಸಂಸ್ಕರಣೆ ಮಾಡಲು ಸಾಧ್ಯವಾಗದೆ ನಗರದ ಹೊರವಲಯದಲ್ಲಿರುವ ಭೂಭರ್ತಿಯಲ್ಲಿ (ಲ್ಯಾಂಡ್ಫಿಲ್) ತುಂಬಲಾಗುತ್ತದೆ. ದೊಡ್ಡಬಳ್ಳಾಪುರ ತಾಲೂಕಿನ ಚಿಗರನಹಳ್ಳಿಯಲ್ಲಿರುವ ಎಂಎಸ್ಜಿಪಿ ಮಿಶ್ರತ್ಯಾಜ್ಯ ಸಂಸ್ಕರಣ ಘಟಕಕ್ಕೆ ಪ್ರತಿದಿನ 400 ಟನ್ ಪ್ರತಿದಿನ ಕಳಿಸಲಾಗುತ್ತದೆ. ಈ ಮಿಶ್ರ ತ್ಯಾಜ್ಯದ ಪ್ರಮಾಣವೇ ಶೇ.85-90 ಇರುತ್ತದೆ. ಅದರಲ್ಲಿ ಪ್ರಮುಖವಾಗಿ ಹಸಿ ಕಸವೇ ಇರುತ್ತದೆ. ಪ್ರತಿದಿನ ಸರಾಸರಿ 3ರಿಂದ 3.5 ಸಾವಿರ ಟನ್ ಕಸ ಭೂಭರ್ತಿಗೆ ಹೋಗುತ್ತದೆ. ಎರಡೂ ಸೇರಿ 3.5ರಿಂದ 4 ಸಾವಿಟ ಟನ್ ಉತ್ಪಾದನೆಯಾಗುತ್ತದೆ. ಮಾರ್ಚ್ನಲ್ಲಿ ಪ್ರತಿದಿನ ಸರಾಸರಿ 3,990 ಉತ್ಪಾದನೆ ಯಾಗುತ್ತಿದ್ದ ತ್ಯಾಜ್ಯ ಇದೀಗ ಏಪ್ರಿಲ್ನಲ್ಲಿ ಸರಾಸರಿ 3,070 ಟನ್ಗೆ ಇಳಿಕೆಯಾಗಿದೆ. ಸಂಸ್ಕರಣ ಘಟಕಗಳಿಗೆ ರವಾನೆಯಾಗುವ ಒಣಕಸದ ಪ್ರಮಾಣ 110 ಟನ್ ಕಡಿಮೆಯಾಗಿದ್ದರೆ ಭೂಭರ್ತಿಗೆ ಹೋಗುವ ಮಿಶ್ರ ತ್ಯಾಜ್ಯ 810 ಟನ್ ಕಡಿಮೆಯಾಗಿದೆ. ಒಟ್ಟಾರೆ 920 ಟನ್ ಕಸ ಉತ್ಪಾದನೆ ಪ್ರತಿದಿನ ಕಡಿಮೆಯಾಗಿದೆ.
ಮಾರುಕಟ್ಟೆಗೆಳು ದೂರ: ಲಕ್ಷಾಂತರ ಸಂಖ್ಯೆಯಲ್ಲಿ ಬೆಂಗಳೂರು ನಿವಾಸಿಗಳು ತಂತಮ್ಮ ಊರು ಸೇರಿಕೊಂಡಿದ್ದಾರೆ. ಮಾರುಕಟ್ಟೆಗಳು ದೂರದಲ್ಲಿರುವ ಕಾರಣಕ್ಕೆ ಈ ಹಿಂದಿನ ಪ್ರಮಾಣದಲ್ಲಿ ನಗರದ ಕೇಂದ್ರ ಪ್ರದೇಶಗಳಿಗೆ ಸರಬರಾಜಾಗುತ್ತಿಲ್ಲ. 7 ಕಸ ಸಂಸ್ಕರಣ ಘಟಕಗಳಿಗೆ ರವಾನೆಯಾಗುವ ತ್ಯಾಜ್ಯದ ಪ್ರಮಾಣ ಮಾರ್ಚ್ ತಿಂಗಳ ಹೋಲಿಕೆಯಲ್ಲಿ ಶೇ.17 ತಗ್ಗಿದೆ. ಆದರೆ ಭೂಭರ್ತಿ ಹಾಗೂ ಎಂಎಸ್ಜಿಪಿಗೆ ಕಳಿಸಲಾಗುವ ಮಿಶ್ರ ತ್ಯಾಜ್ಯದ ಪ್ರಮಾಣ ಶೇ.24 ಕುಸಿತ ಕಂಡಿದೆ. ಒಟ್ಟಾರೆಯಾಗಿ ಮಾರ್ಚ್ ಹೋಲಿಕೆಯಲ್ಲಿ ಶೇ.23 ತ್ಯಾಜ್ಯ ಉತ್ಪಾದನೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಳಿಸಿದ್ದಾರೆ.
ಹೋಟೆಲ್ಗಳು ಮುಚ್ಚಿರುವುದು ಹಾಗೂ ಬಹಳಷ್ಟು ಜನರು ಬೆಂಗಳೂರು ತೊರೆದಿರುವುದರ ಕಾರಣಕ್ಕೆ ತ್ಯಾಜ್ಯದ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದರಲ್ಲೂ ಮಿಶ್ರ ತ್ಯಾಜ್ಯ ಗಣನೀಯವಾಗಿ ಕಡಿಮೆಯಾಗಿದೆ. | ಡಿ. ರಂದೀಪ್ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತ
ರಮೇಶ ದೊಡ್ಡಪುರ ಬೆಂಗಳೂರು