

ನವದೆಹಲಿ: ದೇಶದಲ್ಲಿ ಕರೊನಾ ಎರಡನೇ ಅಲೆಯ ಅಬ್ಬರ ಕೊಂಚ ಕಡಿಮೆಯಾಗಿದ್ದು, ಶನಿವಾರದಂದು ಸೋಂಕು ಮತ್ತಷ್ಟು ಕಡಿಮೆಯಾಗಿದೆ. ಒಂದು ದಿನದಲ್ಲಿ 60 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದೃಢವಾಗಿದ್ದು, ಇದು ಕಳೆದ 81 ದಿನಗಳಲ್ಲೇ ಅತ್ಯಂತ ಕಡಿಮೆ ಏಕದಿನ ಏರಿಕೆಯಾಗಿದೆ.
ಶನಿವಾರ 58,419 ಜನರಲ್ಲಿ ಸೋಂಕು ದೃಢವಾಗಿದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆ 2.98 ಕೋಟಿ ದಾಟಿದೆ. 24 ಗಂಟೆಗಳಲ್ಲಿ 1,576 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 3.86 ಲಕ್ಷ ದಾಟಿದೆ. ಶನಿವಾರ ಪತ್ತೆಯಾದ ಸೋಂಕಿನಲ್ಲಿ ಅತಿ ಹೆಚ್ಚು ಸೋಂಕಿತರು ಕೇರಳದವರಾಗಿದ್ದಾರೆ. ಕೇರಳದಲ್ಲಿ 12,443 ಪ್ರಕರಣಗಳು ಕಾಣಿಸಿಕೊಂಡಿದ್ದರೆ, ಮಹಾರಾಷ್ಟ್ರದಲ್ಲಿ 8,912 ಮತ್ತು ತಮಿಳುನಾಡಿನಲ್ಲಿ 8,183 ಪ್ರಕರಣ ದೃಢವಾಗಿದೆ.
ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಕಳೆದ ಆಗಸ್ಟ್ 7ಕ್ಕೆ 20 ದಾಟಿದ್ದು, ಅದಾದ ನಂತರ ಆಗಸ್ಟ್ 23ಕ್ಕೆ 30 ಲಕ್ಷ, ಸೆಪ್ಟೆಂಬರ್ 5ಕ್ಕೆ 40 ಲಕ್ಷ, ಸೆ.16ಕ್ಕೆ 50 ಲಕ್ಷ, ಸೆ.28ಕ್ಕೆ 60 ಲಕ್ಷ, ಅಕ್ಟೋಬರ್ 11ಕ್ಕೆ 70 ಲಕ್ಷ, ಅ.29ಕ್ಕೆ 80 ಲಕ್ಷ, ನವೆಂಬರ್ 20ಕ್ಕೆ 90 ಲಕ್ಷ ಹಾಗೂ ಡಿಸೆಂಬರ್ 19ಕ್ಕೆ 1 ಕೋಟಿಯ ಗಡಿ ದಾಟಿತ್ತು. ಈ ವರ್ಷದ ಮೇ 4ಕ್ಕೆ 2 ಕೋಟಿ ದಾಟಿರುವ ಸೋಂಕಿತರು ಸಂಖ್ಯೆ ಸದ್ಯದಲ್ಲೇ 3 ಕೋಟಿ ದಾಟಲಿದೆ. (ಏಜೆನ್ಸೀಸ್)