ಬೋನಿಗೆ ಬಿದ್ದ ಚಿರತೆ

1002223883
Published on

ಮೇಲುಕೋಟೆ: ರಾಂಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಹಲವು ದಿನಗಳಿಂದ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದ್ದ ಚಿರತೆ ಕೊನೆಗೂ ಶನಿವಾರ ಬೆಳಗಿನ ಜಾವ ಬೋನಿಗೆ ಬಿದ್ದಿದೆ.

ಮೇಲುಕೋಟೆಯ ಯೋಗನರಸಿಂಹಸ್ವಾಮಿ ಬೆಟ್ಟ ಹಾಗೂ ಅರಣ್ಯದಂಚಿನ ಗ್ರಾಮಗಳಾದ ರಾಂಪುರ, ಪಗಡೆಕಲ್ಲಹಳ್ಳಿ, ತಾಳೆಕೆರೆ, ಬಳಿಘಟ್ಟ, ಎಂ.ಆರ್. ಕೊಪ್ಪಲು, ಮದೇನಹಳ್ಳಿ, ನಾರಣಾಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿನ ಜಮೀನಿಗೆ ನುಗ್ಗಿ ಹಸು, ಕುರಿ, ನಾಯಿ ಸೇರಿದಂತೆ ಸಾಕು ಪ್ರಾಣಿಗಳನ್ನು ತಿಂದು ಪರಾರಿಯಾಗುತ್ತಿದ್ದ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು.

ವಲಯ ಅರಣ್ಯಾಧಿಕಾರಿ ಪ್ರಶಾಂತ್ ನೇತೃತ್ವದ ತಂಡ ರೈತ ಸಣ್ಣಪುಟ್ಟಣ್ಣ ಅವರ ಜಮೀನಿನಲ್ಲಿ ನಾಲ್ಕೈದು ದಿನಗಳ ಹಿಂದೆ ಇಟ್ಟಿದ್ದ ಬೋನಿಗೆ ಶನಿವಾರ ಬೆಳಗ್ಗೆ ಚಿರತೆ ಬಿದ್ದಿದೆ. ಅಂದಾಜು ಮೂರುವರೆ ವರ್ಷದ ಗಂಡು ಚಿರತೆಯಾಗಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ದೂರದ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಪ್ರಶಾಂತ್ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಕೆ.ಟಿ.ರವೀಂದ್ರ, ಎ.ಪಿ.ಮಂಜೇಶ್, ಬೋರೇಗೌಡ, ದೇವರಾಜು, ವೆಂಕಟೇಶ್ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net